ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಕಾರಣ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ’ ಹೃದ್ರೋಗ ಪತ್ತೆಗೆ ಆದ್ಯತೆ ನೀಡಿದ್ದು, ಎರಡು ವರ್ಷಗಳಲ್ಲಿ 7.49 ಲಕ್ಷ ಮಂದಿಗೆ ಇಸಿಜಿ ಪರೀಕ್ಷೆ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಮಾಡಲಾಗಿದೆ.
ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ಒಂದು ಗಂಟೆ ನಿರ್ಣಾಯಕವಾಗಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ತಾಲ್ಲೂಕು ಮಟ್ಟದಲ್ಲಿಯೇ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಕಾರ್ಯಕ್ರಮದಡಿ ಈ ಯೋಜನೆ ಪ್ರಾರಂಭಿಸಲಾಗಿದೆ. ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಕಾರಣ, ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೃದ್ರೋಗ ಸಮಸ್ಯೆ ಇರುವವರಿಗೆ ಆಯ್ದ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಇಸಿಜಿ ನಡೆಸಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತೃತೀಯ ಹಂತದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ.
ಈ ಯೋಜನೆಯಡಿ 7,239 ತೀವ್ರ ಹೃದಯಾಘಾತ ಪ್ರಕರಣಗಳನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಲಾಗಿದೆ. ಹೃದಯಾಘಾತದಿಂದ ಸಂಭವಿಸುತ್ತಿರುವ ಮರಣ ಪ್ರಕರಣಗಳನ್ನು ತಡೆಯುವುದು ಯೋಜನೆಯ ಉದ್ದೇಶವಾಗಿದೆ. ಹೃದಯ ಸ್ತಂಭನದಿಂದ ಮೃತಪಟ್ಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ 2023ರ ಮಾರ್ಚ್‌ನಲ್ಲಿ ಮೊದಲ ಹಂತದಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. 2024ರ ಮಾರ್ಚ್‌ನಲ್ಲಿ ಎರಡನೇ ಹಂತದಲ್ಲಿ ರಾಜ್ಯದಾದ್ಯಂತ ಯೋಜನೆಯನ್ನು ವಿಸ್ತರಿಸಲಾಗಿದೆ.
ಹಬ್ ಮತ್ತು ಸ್ಪೋಕ್ ಮಾದರಿ: ಯೋಜನೆಯಡಿ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳನ್ನೂ ಒಳಗೊಂಡ ಜಾಲವನ್ನು ರೂಪಿಸಲಾಗಿದೆ. ‘ಹಬ್ ಮತ್ತು ಸ್ಪೋಕ್’ ಮಾದರಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಹೃದಯಾಘಾತಕ್ಕೆ ಒಳಗಾದವರಿಗೆ ಯೋಜನೆಯಡಿ ನೋಂದಾಯಿತ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಒದಗಿಸಿ, ಹೃದಯ ನಾಳದ ಬ್ಲಾಕ್ ತೆರವುಗೊಳಿಸಲು ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಬಳಿಕ ಕ್ಯಾಥ್‌ಲ್ಯಾಬ್ ಇರುವ ಆಸ್ಪತ್ರೆಗಳಿಗೆ ಕಳಿಸಲಾಗುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಘಟಕವನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು, ಸೇವೆ ನೀಡಲಾಗುತ್ತಿದೆ.
‘ವೇಗದ ಚಿಕಿತ್ಸೆಗೆ ಯೋಜನೆಯಡಿ ಆಂಬುಲೆನ್ಸ್ ಹಾಗೂ ಟೆಲಿ ಐಸಿಯು ಬಳಸಿಕೊಳ್ಳಲಾಗುತ್ತಿದೆ. ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ನಡೆಸುವ ಇಸಿಜಿಯನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಪರಿಶೀಲಿಸಿ, ಅಪಾಯ ಇದ್ದಲ್ಲಿ ತಜ್ಞ ವೈದ್ಯರಿಗೆ ಶಿಫಾರಸು ಮಾಡಲಾಗುತ್ತದೆ. ತಜ್ಞ ವೈದ್ಯರು ರೋಗಿಯ ಚಿಕಿತ್ಸೆ ಬಗ್ಗೆ ನಿರ್ಧರಿಸುತ್ತಾರೆ. ಈ ಪ್ರಕ್ರಿಯೆ ಕೇವಲ ಹತ್ತು ನಿಮಿಷಗಳಲ್ಲಿ ನಡೆಯಲಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಹೃದಯಾಘಾತದಿಂದ ಸಂಭವಿಸುವ ಸಾವು ತಡೆಗೆ ಯೋಜನೆ ಸಹಕಾರಿಯಾಗಿದೆ. ಹೃದಯ ಎದೆ ನೋವಿನ ಸಂಬಂಧ ತಾಲ್ಲೂಕು ಆಸ್ಪತ್ರೆಗೆ ಬಂದವರಿಗೆ ಇಸಿಜಿ ನಡೆಸಿ ಚಿಕಿತ್ಸೆ ಒದಗಿಸಲಾಗುತ್ತಿದೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಹೃದಯಾಘಾತದ ಬಗ್ಗೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಹಾಸನದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆಡಾ.ಕೆ.ಎಸ್. ರವೀಂದ್ರನಾಥ್ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ
817 ಮಂದಿಗೆ ನೆರವಾದ ಚುಚ್ಚುಮದ್ದು
ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 70 ತಾಲ್ಲೂಕು ಆಸ್ಪತ್ರೆಗಳು ಹಾಗೂ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗಿದೆ. ಈ ಆಸ್ಪತ್ರೆಗಳಲ್ಲಿ ‘ಸ್ಟೆಮಿ ಕಿಟ್’ಗಳನ್ನು ಅಳವಡಿಸಲಾಗಿದೆ. ತೀವ್ರ ಹೃದಯಾಘಾತ ಪ್ರಕರಣಗಳಲ್ಲಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಈ ಆಸ್ಪತ್ರೆಗಳಲ್ಲಿ ‘ಟೆನೆಕ್ಟ್ ಪ್ಲಸ್’ ಚುಚ್ಚುಮದ್ದುಗಳನ್ನು ಒದಗಿಸಲಾಗುತ್ತಿದೆ. ಎರಡು ವರ್ಷಗಳಲ್ಲಿ ಈ ಚುಚ್ಚುಮದ್ದಿನ ನೆರವಿನಿಂದ 817 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಚುಚ್ಚುಮದ್ದಿನ ಒಂದು ಬಾಟಲಿಗೆ ₹30 ಸಾವಿರ ದರ ಇದೆ. ಹೃದಯಾಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ ಚುಚ್ಚುಮದ್ದು ಅಗತ್ಯವಿದ್ದಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.