ADVERTISEMENT

ಯುವಜನರಲ್ಲಿ ಹೃದಯಾಘಾತ ಹೆಚ್ಚಳ: ಜಯದೇವ ಸಂಸ್ಥೆ ವಿಶ್ಲೇಷಣೆಯಿಂದ ದೃಢ

‘ನಿಮ್ಮ ಹೃದಯ ನಮ್ಮ ಕಾಳಜಿ’ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 0:54 IST
Last Updated 3 ಸೆಪ್ಟೆಂಬರ್ 2025, 0:54 IST
ರೋಗಿಗಳ ಸಹಾಯಕರಿಗೆ ನಿರ್ಮಿಸಿದ್ದ ವಸತಿ ನಿಲಯವನ್ನು ಬಿ.ಎಸ್. ಪಾಟೀಲ ಉದ್ಘಾಟಿಸಿದರು. ಡಾ.ಕೆ.ಎಸ್. ರವೀಂದ್ರನಾಥ್ ಉಪಸ್ಥಿತರಿದ್ದರು
ರೋಗಿಗಳ ಸಹಾಯಕರಿಗೆ ನಿರ್ಮಿಸಿದ್ದ ವಸತಿ ನಿಲಯವನ್ನು ಬಿ.ಎಸ್. ಪಾಟೀಲ ಉದ್ಘಾಟಿಸಿದರು. ಡಾ.ಕೆ.ಎಸ್. ರವೀಂದ್ರನಾಥ್ ಉಪಸ್ಥಿತರಿದ್ದರು   

ಬೆಂಗಳೂರು: ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿಶ್ಲೇಷಣೆಯಿಂದ ದೃಢಪಟ್ಟಿದ್ದು, ಹೃದಯಾಘಾತ ಸಂಬಂಧ ಸಂಸ್ಥೆಯ ಬೆಂಗಳೂರು ಕೇಂದ್ರಕ್ಕೆ ಪ್ರತಿನಿತ್ಯ ಭೇಟಿ ನೀಡುವ ಸರಾಸರಿ 30 ಮಂದಿಯಲ್ಲಿ ಶೇ 25 ರಷ್ಟು ಮಂದಿ 45 ವರ್ಷದೊಳಗಿನವರಾಗಿದ್ದಾರೆ. 

ಚಿಕ್ಕ ವಯಸ್ಸಿನಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳ ಅಧ್ಯಯನಕ್ಕೆ ಸಂಸ್ಥೆಯು ‘ನಿಮ್ಮ ಹೃದಯ ನಮ್ಮ ಕಾಳಜಿ’ ಕಾರ್ಯಕ್ರಮ ರೂಪಿಸಿದೆ. ಈ ಕಾರ್ಯಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಇಲ್ಲಿ ಮಂಗಳವಾರ ಚಾಲನೆ ನೀಡಿದರು. ಈ ಕಾರ್ಯಕ್ರಮದಡಿ ಹೃದಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗುತ್ತಿದ್ದು, ಹೃದಯಾಘಾತಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು, ಆರಂಭಿಕ ಹಂತದಲ್ಲಿಯೇ ಸಮಸ್ಯೆ ಪತ್ತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಲಾಗುತ್ತದೆ. 

ಈ ಕಾರ್ಯಕ್ರಮದಡಿ ಅಧ್ಯಯನಕ್ಕೆ ಹೃದಯ ಸಂಬಂಧಿ ಸಮಸ್ಯೆ ಹೊಂದಿರುವ 40 ವರ್ಷದೊಳಗಿನ 5 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿದ್ದಾರೆ. ಇವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿರುವುದಕ್ಕೆ ಸಹಕಾರಿಯಾದ ಅಪಾಯಕಾರಿ ಅಂಶಗಳನ್ನು ಗುರುತಿಸಲಾಗಿದೆ. ಅರ್ಧಕ್ಕೂ ಅಧಿಕ ಮಂದಿ ಧೂಮಪಾನಿಗಳಾಗಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. 

ADVERTISEMENT

‘ಧೂಮಪಾನ, ತಂಬಾಕು ಉತ್ಪನ್ನ ಸೇವನೆ, ಅತಿಯಾದ ಮದ್ಯಪಾನ, ವ್ಯಾಯಾಮ ಇಲ್ಲದ ಜೀವನ, ಪಾಶ್ಚಾತ್ಯ ಆಹಾರ ಪದ್ಧತಿ, ಸಿಹಿ ಪಾನೀಯಗಳ ಸೇವನೆ, ಜೀವನಶೈಲಿ ಬದಲಾವಣೆ ಸೇರಿ ವಿವಿಧ ಕಾರಣಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವ ಯುವಜನರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಕೂಡ ಹೃದಯಾಘಾತದ ಅಪಾಯವನ್ನು ತಂದೊಡ್ಡುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಹೇಳಿದರು.

‘ಮಾನಸಿಕ, ಸಾಮಾಜಿಕ ಒತ್ತಡ, ವಾಯುಮಾಲಿನ್ಯ ಸೇರಿ ವಿವಿಧ ಅಂಶಗಳು ಸಹ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಅಪಾಯಕಾರಿ ಅಂಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಬಿತ್ತರಿಸಲಾಗುತ್ತಿದೆ’ ಎಂದರು. 

ರೋಗಿಗಳ ಸಹಾಯಕರಿಗೆ ನಿರ್ಮಿಸಿದ್ದ ವಸತಿ ನಿಲಯವನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಈ ವಸತಿ ನಿಲಯ ನಿರ್ಮಾಣಕ್ಕೆ ದೇಣಿಗೆ ನೀಡಿದ್ದ ಎನ್.ಕೆ. ಕಂಪ್ಯೂಟರ್ಸ್ ಕಂಪನಿಯ ಮಾಲೀಕರ ಪೋಷಕರಾದ ಕಣ್ಣಗಿ ಮತ್ತು ನಾರಾಯಣಸ್ವಾಮಿ ಅವರನ್ನು ಗೌರವಿಸಲಾಯಿತು. 

ವೈದ್ಯರು ರೋಗಿಗಳ ಜತೆಗೆ ಉತ್ತಮವಾಗಿ ಸಂವಹನ ನಡೆಸಬೇಕು. ಸ್ಪರ್ಶಿಸಿ ವಿಚಾರಿಸಿದರೆ ಕಾಯಿಲೆ ಅರ್ಧದಷ್ಟು ವಾಸಿಯಾದ ಭಾವನೆ ಅನಾರೋಗ್ಯ ಪೀಡಿತ ವ್ಯಕ್ತಿಯಲ್ಲಿ ಮೂಡುತ್ತದೆ
ಬಿ.ಎಸ್. ಪಾಟೀಲ ಲೋಕಾಯುಕ್ತ ನ್ಯಾಯಮೂರ್ತಿ

ಹೃದಯ ಸಮಸ್ಯೆಗೆ ಅಪಾಯಕಾರಿ ಅಂಶಗಳು  

ಅಪಾಯಕಾರಿ ಅಂಶ; ಪ್ರಮಾಣ (ಶೇ)

ಧೂಮಪಾನ;55

ಅಧಿಕ ರಕ್ತದೊತ್ತಡ;14

ಮಧುಮೇಹ;11

ಕೊಲೆಸ್ಟ್ರಾಲ್ (ಕೊಬ್ಬಿನಾಂಶ);23

ಕೌಟುಂಬಿಕ ಇತಿಹಾಸ;16

ಅಪಾಯಕಾರಿ ಅಂಶಗಳು ಇಲ್ಲದಿರುವಿಕೆ;20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.