ADVERTISEMENT

ಅಗ್ಗದ ದರದಲ್ಲಿ ದುಬಾರಿ ಕಸಿ

ಗ್ಯಾಸ್ಟ್ರೊಎಂಟ್ರಾಲಜಿ ಸಂಸ್ಥೆ: 8 ತಿಂಗಳಲ್ಲಿ 30 ಸಾವಿರ ಮಂದಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 20:28 IST
Last Updated 1 ಅಕ್ಟೋಬರ್ 2022, 20:28 IST
ಡಾ. ನಾಗೇಶ್ ಎನ್.ಎಸ್.
ಡಾ. ನಾಗೇಶ್ ಎನ್.ಎಸ್.   

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ₹26 ಲಕ್ಷದಿಂದ ₹40 ಲಕ್ಷ ವೆಚ್ಚವಾಗುವ ಯಕೃತ್ತು ಕಸಿಯನ್ನು ‘ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್‌’ ಸಂಸ್ಥೆಯು ಅಗ್ಗದ ದರದಲ್ಲಿ ನಡೆಸಲಾರಂಭಿಸಿದೆ.

ದಾನಿಗಳ ನೆರವಿನಿಂದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ತಲೆಯೆತ್ತಿರುವ ಈ ಸಂಸ್ಥೆಯು, 120 ಹಾಸಿಗೆಗಳನ್ನು ಒಳಗೊಂಡಿದೆ. ಉದರ ಸಂಬಂಧಿ ಸಮಸ್ಯೆಗಳು ಹಾಗೂ ಕಸಿಗಳಿಗೆ ಒಂದೇ ಸೂರಿನಡಿ ಸಮಗ್ರ ಪರೀಕ್ಷೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ವಿವಿಧ ಪರೀಕ್ಷೆಗಳಿಗೆ ರೋಗಿಗಳು ಅಲೆದಾಡುವುದು ತಪ್ಪಿದೆ. 8 ತಿಂಗಳಲ್ಲಿಯೇ ಉದರ ಸಂಬಂಧಿ ಸಮಸ್ಯೆಗಳಿಗೆ 30 ಸಾವಿರ ಮಂದಿ ಇಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ಮೊದಲ ಉದರ ಸಂಬಂಧಿ ಸಂಸ್ಥೆ ಇದಾಗಿದೆ. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ದಾನಿಗಳು ಸಂಸ್ಥೆ ನಿರ್ಮಾಣಕ್ಕೆ
₹ 22.5 ಕೋಟಿ ಒದಗಿಸಿದ್ದರು. 2021ರ ಅಕ್ಟೋಬರ್‌ನಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಹೃದಯ, ಮೂತ್ರಪಿಂಡ ಸೇರಿ ವಿವಿಧ ಅಂಗಾಂಗಗಳ ಕಸಿಯನ್ನು ಇಲ್ಲಿ ನಡೆಸಲಾಗುತ್ತದೆ. ಸಂಸ್ಥೆಯಲ್ಲಿ ಉದರ, ಕುರುಳು ಸಂಬಂಧಿ ಕ್ಯಾನ್ಸರ್‌ ಗಳಿಗೂ ಚಿಕಿತ್ಸೆ ಒದಗಿಸಲಾಗುತ್ತದೆ. ಸ್ವತಂತ್ರ ಕೀಮೋಥೆರಪಿ ಘಟಕವನ್ನೂ ಹೊಂದಿದೆ. ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ₹ 4 ಲಕ್ಷದಲ್ಲಿ ಕಸಿ ಮಾಡಲಾಗುತ್ತಿದೆ.

ADVERTISEMENT

ಯಕೃತ್ತು ಕಸಿ ಕ್ಲಿನಿಕ್‌: ಯಕೃತ್ತು ಕಸಿಗೆ ರೋಗಿಗಳನ್ನು ಮೌಲ್ಯಮಾಪನ ಮಾಡಲು ಯಕೃತ್ತು ಕಸಿ ಕ್ಲಿನಿಕ್‌
ಗಳನ್ನು ಸಂಸ್ಥೆ ಸ್ಥಾಪಿಸಿದೆ. ಯಕೃತ್ತಿನ ಕಸಿಗೆ 500ಕ್ಕೂ ಅಧಿಕ ರೋಗಿಗಳನ್ನು ಮೌಲ್ಯಮಾಪನ ಮಾಡಲಾಗಿದೆ. 6,500ಕ್ಕೂ ಅಧಿಕ ಶಸ್ತ್ರಚಿಕಿತ್ಸೆ, ಎಂಡೋಸ್ಕೋಪಿ ನಡೆಸಲಾಗಿದೆ.

‘ಸಂಸ್ಥೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕಾರ್ಪೊರೇಟ್ ಆಸ್ಪತ್ರೆಗಳ ಮಾದರಿಯಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ.ಈ ಮೊದಲುಉದರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ಪರೀಕ್ಷೆಗಳಿಗೆ ರೋಗಿಗಳು ಅಲೆದಾಟ ನಡೆಸಬೇಕಿತ್ತು. ನಮ್ಮಲ್ಲಿ ರೋಗಿ ಒಮ್ಮೆ ದಾಖಲಾದರೆ ಇಲ್ಲಿಯೇ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಿ, ಶಸ್ತ್ರಚಿಕಿತ್ಸೆಗಳನ್ನೂ ನಡೆಸಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್ ಎನ್.ಎಸ್. ತಿಳಿಸಿದರು.

ರೋಗಿಗಳಿಗೆ ಉಚಿತ ಸೇವೆ

‘ಉದರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕರುಳು, ಅನ್ನನಾಳ, ಹೊಟ್ಟೆ, ಜಠರ, ಯಕೃತ್ತು ಸೇರಿ ವಿವಿಧ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಯಕೃತ್ತು ಕಸಿಗೆ ಕಾಯುತ್ತಿರುವ ಪ್ರತಿ 30 ಮಂದಿಯಲ್ಲಿ ಒಬ್ಬರಿಗೆ ಮಾತ್ರ ಹೊಂದಾಣಿಕೆಯಾಗುವ ಯಕೃತ್ತು ಲಭ್ಯವಾಗುತ್ತದೆ. 29 ಮಂದಿ ಕಸಿಗೆ ಕಾಯಬೇಕಾಗುತ್ತದೆ. ಅಂಗಾಂಗ
ಸಿಗುವವರೆಗೆ ನಿಯಮಿತವಾಗಿ ಆಸ್ಪತ್ರೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಅವಧಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ನಮ್ಮಲ್ಲಿ ಕಸಿ ನಡೆಸುವವರೆಗೂ ಉಚಿತ ಸೇವೆ ದೊರೆಯಲಿದೆ’ ಎಂದು ಡಾ. ನಾಗೇಶ್ ಎನ್.ಎಸ್. ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.