ADVERTISEMENT

ಮಳೆ: ಮನೆಗೆ ನುಗ್ಗಿದ ನೀರು, ಉರುಳಿ ಬಿದ್ದ ಮರಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 21:53 IST
Last Updated 5 ಜುಲೈ 2021, 21:53 IST

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಮರಗಳು ಉರುಳಿಬಿದ್ದಿದ್ದವು.

ಮೋಡ ಕವಿದ ವಾತಾವರಣ ಜೊತೆಯಲ್ಲೇ ನಗರದಲ್ಲಿ ಉತ್ತಮ ಮಳೆ ಸುರಿಯಿತು. ರಾಜಗೋಪಾಲನಗರ ಬಳಿಯ ಎಂ.ಎಸ್. ಲೇಔಟ್‌ನಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ಜೋರಾಗಿ ಮಳೆ ಸುರಿಯುವಾಗಲೇ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯಿತು. ಅದೇ ನೀರು ಮನೆಯೊಳಗೆ ನುಗ್ಗಿದ್ದರಿಂದ ಪೀಠೋಪಕರಣ ಹಾಗೂ ಇತರೆ ವಸ್ತುಗಳು ನೀರಿನಲ್ಲೇ ತೇಲಾಡುತ್ತಿದ್ದವು. ಕೆಲ ನಿವಾಸಿಗಳು ನೀರಿನಲ್ಲೇ ನಿಂತುಕೊಂಡಿದ್ದರು.

ADVERTISEMENT

ನೀರಿನ ಹರಿಯುವಿಕೆ ಪ್ರಮಾಣ ಹೆಚ್ಚಿದ್ದರಿಂದ ನಿವಾಸಿಗಳು ಎಷ್ಟೇ ಪ್ರಯತ್ನಪಟ್ಟರೂ ನೀರನ್ನು ಸಂಪೂರ್ಣ
ವಾಗಿ ಹೊರಹಾಕಲು ಸಾಧ್ಯವಾಗಲಿಲ್ಲ. ನಸುಕಿನ ಸಮಯದಲ್ಲಿ ಮಳೆ ಕಡಿಮೆಯಾದ ನಂತರವೇ ನಿವಾಸಿ ನೀರು ಹೊರ ಹಾಕಿದರು. ಈ ಬಗ್ಗೆ ದೂರು ಬರುತ್ತಿದ್ದಂತೆ ಬಿಬಿಎಂಪಿ ಸಿಬ್ಬಂದಿಯೂ ಸ್ಥಳಕ್ಕೆ ಹೋಗಿ ನೀರು ಹರಿದುಹೋಗಲು ದಾರಿ ಮಾಡಿದರು.

ಮಳೆ ಸುರಿಯುವ ಸಂದರ್ಭದಲ್ಲೇ ನಗರದಲ್ಲಿ ಮರಗಳು ಉರುಳಿಬಿದ್ದಿವೆ.

ಮಲ್ಲೇಶ್ವರ ರೈಲ್ವೆ ನಿಲ್ದಾಣ ರಸ್ತೆ ಹಾಗೂ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿ ಮರಗಳು ನೆಲಕ್ಕುರುಳಿದ್ದವು. ಇದರಿಂದಾಗಿ ಸೋಮವಾರ ಬೆಳಿಗ್ಗೆ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಯಿತು. ಸಂಚಾರ ದಟ್ಟಣೆಯೂ ಕಂಡುಬಂತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ, ಮರಗಳನ್ನು ಕತ್ತರಿಸಿ ಬೇರೆಡೆ ಸಾಗಿಸಿದರು. ನಂತರವೇ ಸಂಚಾರ ಸ್ಥಿತಿ ಯಥಾಸ್ಥಿತಿಗೆ ಬಂತು.

‘ನಗರದಲ್ಲಿ ಮಳೆ ಜೋರಾಗಿದ್ದು, ಹಲವೆಡೆ ರಸ್ತೆಯಲ್ಲಿ ನೀರು ಹರಿದಿದೆ. ಮನೆಗಳಿಗೆ ನೀರು ನುಗ್ಗಿದ್ದ ಹಾಗೂ ಮರಗಳು ಬಿದ್ದ ಬಗ್ಗೆ ಮಾತ್ರ ದೂರುಗಳು ಬಂದಿದೆ. ಉಳಿದಂತೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.