ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ನಗರದ ವಿವಿಧೆಡೆ ಮಂಗಳವಾರ ಮಳೆ ಸುರಿಯಿತು.
ಅ.21ರಂದೂ ಬೆಂಗಳೂರಿನಾದ್ಯಂತ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಸಂಜೆ 6.30ಕ್ಕೆ ಶುರುವಾದ ಮಳೆ ರಾತ್ರಿ 10ರವರೆಗೂ ಸತತವಾಗಿ ಸುರಿಯಿತು. ಭಾರಿ ಮಳೆಯಿಂದ ಇಳಿಜಾರು ಪ್ರದೇಶಗಳಲ್ಲಿ ನೀರು ನುಗ್ಗಿತು. ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಹೆಬ್ಬಾಳ, ಗಂಗಾನಗರ, ಜಯನಗರ, ಆರ್.ಟಿ.ನಗರ, ಸಂಜಯನಗರ, ಲಕ್ಕಸಂದ್ರ, ಯಲಹಂಕ, ಕೋರಮಂಗಲ, ಚಾಮರಾಜಪೇಟೆ, ಬೊಮ್ಮನಹಳ್ಳಿ, ಜ್ಞಾನಭಾರತಿ, ಹಂಪಿನಗರ, ವಿವಿ ಪುರ, ಬಸವೇಶ್ವರ ನಗರ, ದೊಡ್ಡಜಾಲ, ವಿದ್ಯಾರಣ್ಯಪುರ, ಯಶವಂತಪುರ, ಶಾಂತಿನಗರ, ಮಲ್ಲೇಶ್ವರ, ಸಂಪಂಗಿರಾಮನಗರ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಿರುವುದು ವರದಿಯಾಗಿದೆ.
ಮಲ್ಲತ್ತಹಳ್ಳಿಯ ಅಪಾರ್ಟ್‍ಮೆಂಟ್ ಸಮುಚ್ಛಯವೊಂದರ ಹಿಂಭಾಗದ ಮನೆಗಳಿಗೆ ನೀರು ನುಗ್ಗಿತು. ಮಿನಿ ಟ್ರಕ್‍ವೊಂದು ನಾಯಂಡಹಳ್ಳಿ ಸಮೀಪ ರಸ್ತೆಯಲ್ಲಿದ್ದ ಮ್ಯಾನ್‍ಹೋಲ್‍ಗೆ ಸಿಲುಕಿ, ಕೆಲಕಾಲ ವಾಹನ ದಟ್ಟಣೆಯಾಯಿತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸಾರ್ವಜನಿಕರು ವಾಹನವನ್ನು ಸ್ಥಳಾಂತರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.