ADVERTISEMENT

ಬೆಂಗಳೂರಿನಲ್ಲಿ ಭಾರಿ ಮಳೆ: ಮನೆಗಳಿಗೆ ನೀರು

ಮಲ್ಲತ್ತಹಳ್ಳಿಯಲ್ಲಿ ಹೆಚ್ಚು ಹಾನಿ l ಮೇಲ್ಸೇತುವೆ ಮೇಲೂ ನಿಂತಿದ್ದ ನೀರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 20:45 IST
Last Updated 19 ಅಕ್ಟೋಬರ್ 2020, 20:45 IST
ಜೋರು ಮಳೆಯಿಂದ ಮಲ್ಲತ್ತಹಳ್ಳಿಯಲ್ಲಿ ರಸ್ತೆಗಳು ಜಲಾವೃತವಾಗಿರುವುದು
ಜೋರು ಮಳೆಯಿಂದ ಮಲ್ಲತ್ತಹಳ್ಳಿಯಲ್ಲಿ ರಸ್ತೆಗಳು ಜಲಾವೃತವಾಗಿರುವುದು   

ಬೆಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿಯಿಂದ ನಸುಕಿನವರೆಗೂ ಜೋರು ಮಳೆಯಾಗಿದ್ದು, ಮಲ್ಲತ್ತಹಳ್ಳಿಯಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ನಗರದಲ್ಲೂ ಮೋಡ ಕವಿದ ವಾತಾವರಣವಿತ್ತು. ಆಗಾಗ ಬಿಸಿಲು ಕಾಣಿಸಿಕೊಂಡಿತ್ತು. ತಡರಾತ್ರಿ ಜೋರಾಗಿ ಆರಂಭವಾದ ಮಳೆ, ಹಲವು ಗಂಟೆಗಳವರೆಗೆ ತನ್ನ ಆರ್ಭಟ ಮುಂದುವರಿಸಿತ್ತು.

ಸೋಮವಾರ ಬೆಳಿಗ್ಗೆಯೂ ನಗರದ ಹಲವೆಡೆ ಮಳೆ ಸುರಿಯಿತು. ರಸ್ತೆ ಮೇಲೆ ನೀರು ಹರಿಯಿತು. ವಾಹನ ಸಂಚಾರಕ್ಕೆ ಸವಾರರು ಪರಿತಪಿಸಿದರು.

ADVERTISEMENT

ಕೆಂಗೇರಿ, ರಾಜರಾಜೇಶ್ವರಿನಗರ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ರಾಜಾಜಿನಗರ, ಬಸವೇಶ್ವರನಗರ, ಚಂದ್ರಾಲೇಔಟ್, ಜಯನಗರ, ಹೊಸೂರು ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಹೆಚ್ಚಿತ್ತು.

ಮೈಸೂರು ರಸ್ತೆಯಲ್ಲಿರುವ ಬಿಜಿಎಸ್ ಮೇಲ್ಸೇತುವೆಯಲ್ಲಿ ನೀರು ನಿಂತುಕೊಂಡು ವಾಹನಗಳ ಓಡಾಟಕ್ಕೆ ಅಡ್ಡಿ ಉಂಟಾಯಿತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಿಬಿಎಂಪಿ ಆಯುಕ್ತರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ನೀರು ತೆರವುಗೊಳಿಸಿದರು.

ಜಯನಗರದಲ್ಲಿ ಮೂರು–ನಾಲ್ಕು ಮರಗಳ ಕೊಂಬೆಗಳು ಕತ್ತರಿಸಿ ಬಿದ್ದಿದ್ದವು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಅವರನ್ನು ತೆರವು ಮಾಡಿದರು.

ಮಲ್ಲತ್ತಹಳ್ಳಿಯಲ್ಲಿ ಹೆಚ್ಚು ಹಾನಿ: ಮಲ್ಲತ್ತಹಳ್ಳಿಯ ಸಿದ್ವಿನ್ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡು ಮನೆಗಳಿದ್ದು, ಅವುಗಳಿಗೆ ನೀರು ನುಗ್ಗಿತ್ತು.

‘ಮಳೆಯಿಂದ ಸಂಗ್ರಹವಾದ ನೀರು ಹರಿದು ಹೋಗಲು ಸೂಕ್ತ ಕಾಲುವೆ ವ್ಯವಸ್ಥೆ ಇಲ್ಲ. ಇದರಿಂದಾಗಿ ಮನೆ ನೀರು ಮನೆಗಳಿಗೆ ನುಗ್ಗಿದೆ’ ಎಂದು ಸ್ಥಳೀಯರು ಹೇಳಿದರು.

ಪೀಠೋಪಕರಣ ಸೇರಿದಂತೆ ಹಲವು ಸಾಮಗ್ರಿಗಳು ನೀರಿನಲ್ಲೇ ತೇಲುತ್ತಿದ್ದವು. ನಸುಕಿನಲ್ಲಿ ಮಳೆ ಕಡಿಮೆಯಾದ ನಂತರವೇ ನಿವಾಸಿಗಳು, ನೀರನ್ನು ಮನೆಯಿಂದ ಹೊರಗೆ ಹಾಕಿದರು.

‘ಜೋರು ಮಳೆ ಸುರಿದಾಗಲೆಲ್ಲ ನೀರು ಮನೆಯೊಳಗೆ ನುಗ್ಗುತ್ತದೆ. ಈ ಬಗ್ಗೆ ಬಿಬಿಎಂಪಿಗೆ ಪ್ರತಿ ಬಾರಿಯೂ ದೂರು ನೀಡಲಾಗುತ್ತಿದೆ.ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ’ ಎಂದು ಮಲ್ಲತ್ತಹಳ್ಳಿ ನಿವಾಸಿಯೊಬ್ಬರು ಹೇಳಿದರು.

‘ರಸ್ತೆಯ ಕಾಲುವೆಗಳಲ್ಲಿ ತುಂಬಿಕೊಂಡು ಕಸವೆಲ್ಲ ನೀರಿನ ಜೊತೆ ಮನೆಯೊಳಗೆ ಬರುತ್ತದೆ. ನೀರಿನ ಜೊತೆ ಕಸವನ್ನು ಮನೆಯಿಂದ ಹೊರಗೆ ಹಾಕಬೇಕಾದ ಸ್ಥಿತಿ ಇದೆ’ ಎಂದರು.

ಸಂಚಾರ ದಟ್ಟಣೆ: ತಡರಾತ್ರಿ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆ ಮೇಲೆಯೇ ನೀರು ನಿಂತುಕೊಂಡಿತ್ತು. ಮಂಗಳವಾರ ಬೆಳಿಗ್ಗೆ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಇದರಿಂದಾಗಿ ಸಂಚಾರ ದಟ್ಟಣೆ ಕಂಡುಬಂತು. ಕೆಲಸಕ್ಕೆ ಹೊರಟಿದ್ದವರು ದಟ್ಟಣೆಯಲ್ಲಿ ಸಿಲುಕಿದರು.

ಶಿವಾನಂದ ವೃತ್ತ, ಹೆಬ್ಬಾಳ, ಕೋರಮಂಗಲ, ನಾಯಂಡನಹಳ್ಳಿ ಹಾಗೂ ಸುತ್ತಮುತ್ತ ದಟ್ಟಣೆ ಇತ್ತು.

‘63 ಮಿಲಿ ಮೀಟರ್ ಮಳೆ’

‘ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರ ಭಾಗದಲ್ಲಿ ತಡರಾತ್ರಿಯಿಂದ ಬೆಳಿಗ್ಗೆವರೆಗೆ 63 ಮಿಲಿ ಮೀಟರ್ ಮಳೆ ಆಗಿದೆ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

‘ಬಹುತೇಕ ಕಡೆ ರಸ್ತೆಯಲ್ಲಿ ನೀರು ನಿಂತಿತ್ತು. ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಎಲ್ಲ ಕಡೆಯೂ ಕಾರ್ಯಾಚರಣೆ ನಡೆಸಿ ನೀರು ತೆರವು ಮಾಡಿಸಲಾಗಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.