ADVERTISEMENT

ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಇಲ್ಲ!

ಬೆಂಗಳೂರು ಟ್ರಾಫಿಕ್‌ ಪೊಲೀಸರಿಂದ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:45 IST
Last Updated 24 ಜುಲೈ 2019, 19:45 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರಿನಲ್ಲಿ ಇನ್ನು ಮುಂದೆ ಹೆಲ್ಮೆಟ್‌ ಧರಿಸದೆ ಯಾವುದೇ ಪೆಟ್ರೋಲ್‌ ಬಂಕ್‌ಗೂ ಹೋದರೂ ನಿಮಗೆ ಪೆಟ್ರೋಲ್‌ ಸಿಗಲಿಕ್ಕಿಲ್ಲ! ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರು ದುಡ್ಡು ಕೊಟ್ಟರೂ ಪೆಟ್ರೋಲ್‌ ಹಾಕಲುಬಂಕ್‌ ಸಿಬ್ಬಂದಿ ಸ್ಪಷ್ಟವಾಗಿ ನಿರಾಕರಿಸಬಹುದು.

ಹೌದು!ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಟ್ರಾಫಿಕ್‌ ಪೊಲೀಸರು ಈ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

‘ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್‌ ಇಲ್ಲ’ ಎಂಬ ಹೊಸ ಅಭಿಯಾನಕ್ಕೆ ಟ್ರಾಫಿಕ್‌ ಪೊಲೀಸರು ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಹೀಗಾಗಿ ಹೆಲ್ಮೆಟ್‌ ಧರಿಸಿ ಹೋದರಷ್ಟೇ ಪೆಟ್ರೋಲ್‌. ಇಲ್ಲ ಎಂದರೆ ಇಲ್ಲ.ನೊಯಿಡಾ ಮತ್ತು ಅಲೀಗಡ ಮಾದರಿಯಲ್ಲಿ ಬೆಂಗಳೂರು ಟ್ರಾಫಿಕ್‌ ಪೊಲೀಸರು ಆರಂಭಿಸಿರುವ ವಿನೂತನ ಪ್ರಯತ್ನಕ್ಕೆ ಪೆಟ್ರೋಲ್‌ ಬಂಕ್‌ ಮಾಲೀಕರೂ ಕೈಜೋಡಿಸಿದ್ದಾರೆ.

ADVERTISEMENT

ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಮತ್ತು ಹೆಲ್ಮೆಟ್‌ ಧರಿಸದ ಕಾರಣ ಸಂಭವಿಸುತ್ತಿರುವ ಸಾವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಹೆಲ್ಮೆಟ್‌ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ಇದೀಗ ಶುರುವಾಗಿದೆ.

ನಗರದ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಹೆಚ್ಚುವರಿ ಆಯುಕ್ತ (ಸಂಚಾರ) ಪಿ. ಹರಿಶೇಖರನ್‌ ಅವರು ಈ ಆಲೋಚನೆಯನ್ನು ಮುಂದಿಟ್ಟಿದ್ದರು. ಅದಕ್ಕೆ ಅಧಿಕಾರಿಗಳಿಂದ ಉತ್ತಮ ಸ್ಪಂದನೆ ದೊರೆಯಿತು.

‘ನಿಮ್ಮ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ ಮಾಲೀಕರ ಜತೆ ಮಾತನಾಡಿ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿಕೊಳ್ಳಿ ನಗರದ 44 ಟ್ರಾಫಿಕ್‌ ಇನ್‌ಸ್ಪೆಕ್ಟರ್‌, ಏಳು ಸಹಾಯಕ ಆಯುಕ್ತರು, ಮೂವರು ಉಪ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಅಧಿಕಾರಿಗಳು ಪೆಟ್ರೋಲ್‌ ಬಂಕ್‌ ಮಾಲೀಕರ ಜತೆ ಮಾತನಾಡಿದ್ದು ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದುಪಿ. ಹರಿಶೇಖರನ್‌ ‘ಮೆಟ್ರೊ’ಗೆ ಸ್ಪಷ್ಟಪಡಿಸಿದರು.

‘ನಗರದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿಅಭಿಯಾನ ಆರಂಭವಾಗಲಿದೆ. ಜನರು ಕೂಡ ನಮ್ಮ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.

ಹೆಲ್ಮೆಟ್‌ ಕಂಡರೆ ತಿರಸ್ಕಾರ ಏಕೆ?

ಹೆಲ್ಮೆಟ್‌ ಬಗ್ಗೆ ಯುವ ಜನಾಂಗದಲ್ಲಿಯೇ ಹೆಚ್ಚಿನ ತಿರಸ್ಕಾರ ಕಂಡು ಬರುತ್ತದೆ. ಹೆಲ್ಮೆಟ್‌ ಇದ್ದರೂ ಬೈಕ್‌ ಸವಾರಿ ವೇಳೆ ಧರಿಸಲು ಅಸಡ್ಡೆ ಕಂಡು ಬರುತ್ತದೆ. ಟ್ರಾಫಿಕ್‌ ಪೊಲೀಸರು ದಂಡ ಹಾಕುತ್ತಾರೆ ಎಂಬ ಕಾರಣಕ್ಕಾಗಿ ಹೆಲ್ಮೆಟ್‌ ಧರಿಸುವವರ ಸಂಖ್ಯೆ ಹೆಚ್ಚು. ಮಧ್ಯ ವಯಸ್ಕರು ಮತ್ತು ವಯಸ್ಕರು ಶಿರಸ್ತ್ರಾಣವನ್ನು ಪ್ರಾಣ ರಕ್ಷಣೆಯ ಸಾಧನ ಎಂದು ಪರಿಗಣಿಸಿದ್ದಾರೆ. ಹೆಲ್ಮೆಟ್‌ ಧರಿಸುವುದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ

* ಕೂದಲು ಉದುರುತ್ತವೆ ಮತ್ತು ಬೆಳ್ಳಗಾಗುತ್ತವೆ

*ಬೊಕ್ಕತಲೆಗೆ ಕಾರಣವಾಗುತ್ತದೆ

* ತಲೆಗೆ ಭಾರವಾಗುತ್ತದೆ ಎಂಬ ಉಡಾಫೆ ಮನೋಭಾವ

* ಶೆಕೆ ಮತ್ತು ಬೆವರು ವಾಸನೆಯಿಂದ ಕಿರಿಕಿರಿಯಾಗುತ್ತದೆ

*ಹೇರ್‌ಸ್ಟೈಲ್‌ ಹಾಳಾಗುತ್ತದೆ, ಫ್ಯಾಶನ್‌ಗೆ ಅಡ್ಡಿಯಾಗುತ್ತದೆ

*ಸುರಕ್ಷಿತವಾಗಿ ವಾಹನ ಚಲಾಯಿಸುವುದರಿಂದ ಹೆಲ್ಮೆಟ್‌ ಅಗತ್ಯವಿಲ್ಲ ಎಂಬ ಭಾವನೆ

*ಹೆಲ್ಮೆಟ್‌ ಕಳೆದು ಹೋಗದಂತೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು

ಜಾಗೃತಿಗೆ ಆಕರ್ಷಕ ಕಾರ್ಯಕ್ರಮ

ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತೆ ಮತ್ತು ಜೀವ ಅಮೂಲ್ಯ ಎಂಬುವುದನ್ನು ಮನವರಿಕೆ ಮಾಡಿಕೊಡಲು ಸಂಚಾರ ಪೊಲೀಸ್‌ ಇಲಾಖೆ, ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು ಹಲವಾರು ಕಾರ್ಯಕ್ರಮ, ಅಭಿಯಾನ ಹಮ್ಮಿಕೊಳ್ಳುತ್ತಿವೆ.

‘ಯುದ್ಧದಲ್ಲಿ ಸಾಯುವವರಿಗಿಂತ ರಸ್ತೆಯಲ್ಲಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ’ ‘ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ಮನೆಯಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ. ಸುರಕ್ಷಿತವಾಗಿ ಮನೆ ಸೇರಿ’ ಎಂಬ ಫಲಕಗಳಿಂದ ದ್ವಿಚಕ್ರ ವಾಹನ ಸವಾರರ ಮನ ಪರಿವರ್ತನೆ ಪ್ರಯತ್ನಗಳೂ ನಡೆಯುತ್ತಿವೆ. ಆದರೂ ಅವುಗಳ ಪರಿಣಾಮ ಮಾತ್ರ ಕಂಡು ಬರುತ್ತಿಲ್ಲ.

ಕಾಟಾಚಾರದ ಶಿರಸ್ತ್ರಾಣಗಳು!

ಜೀವ ರಕ್ಷಣೆ, ಸುರಕ್ಷತೆಗಿಂತ ಟ್ರಾಫಿಕ್‌ ಪೊಲೀಸರಿಗೆ ದಂಡ ತೆರುವುದರಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಹೆಲ್ಮೆಟ್‌ ಧರಿಸುವ ಸವಾರರ ಸಂಖ್ಯೆ ಹೆಚ್ಚು. ಪೊಲೀಸರಿಂದ ತಪ್ಪಿಸಿಕೊಳ್ಳುವ ಒಂದೇ ಉದ್ದೇಶದಿಂದ ಕಳಪೆ ಗುಣಮಟ್ಟದ ಮತ್ತು ರಸ್ತೆ ಬದಿಯ ಅಗ್ಗದ ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ. ಬಹುತೇಕ ಹಿಂಬದಿ ಸವಾರರು ಧರಿಸುವ ಹೆಲ್ಮೆಟ್‌ಗಳು ಕೂಡ ಇದೇ ವರ್ಗಕ್ಕೆ ಸೇರುತ್ತವೆ.

‘ಐಎಸ್‌ಐ ಮಾರ್ಕ್‌ ಇಲ್ಲದ ಕಳಪೆ ಗುಣಮಟ್ಟದ ಶಿರಸ್ತ್ರಾಣಗಳು ಸವಾರರು ದಂಡ ತೆರುವುದನ್ನು ತಪ್ಪಿಸಬಹುದು. ಖಂಡಿತ ಅವರ ಪ್ರಾಣ ರಕ್ಷಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಟ್ರಾಫಿಕ್ ಪೊಲೀಸ್‌ ಅಧಿಕಾರಿಗಳು.

***

ಇದು ಕಡ್ಡಾಯ ನಿಯಮ ಅಥವಾ ಒತ್ತಾಯದ ಹೇರಿಕೆ ಅಲ್ಲ. ಜನಜಾಗೃತಿಯ ಅಭಿಯಾನವಷ್ಟೇ. ಜನರ ಜೀವಗಳು ಅಮೂಲ್ಯ ಎಂಬ ಕಾಳಜಿಗೆ ಸಾರ್ವಜನಿಕರು ಸ್ಪಂದಿಸಬೇಕು. ಎಲ್ಲ ಬದಲಾವಣೆ ಕಾನೂನಿನಿಂದಲೇ ಸಾಧ್ಯವಿಲ್ಲ. ಮನ ಪರಿವರ್ತನೆಯಿಂದಲೂ ಸಾಧಿಸಬಹುದು.

- ಪಿ. ಹರಿಶೇಖರನ್‌, ಹೆಚ್ಚುವರಿ ಆಯುಕ್ತ, ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.