ADVERTISEMENT

ಹೆಸರಘಟ್ಟ: ಪ್ರಸ್ತಾವ ಮರು ಪರಿಶೀಲಿಸಿ – ಹೈಕೋರ್ಟ್‌

ಸಂರಕ್ಷಿತ ಪ್ರದೇಶ ಪ್ರಸ್ತಾವ ಕೈಬಿಟ್ಟಿದ್ದನ್ನು ಪ್ರಶ್ನಿಸಿದ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 6:16 IST
Last Updated 31 ಜುಲೈ 2022, 6:16 IST

ಬೆಂಗಳೂರು: ‘ಹೆಸರಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವವನ್ನು ಕೈಬಿಡುವ ನಿರ್ಧಾರವನ್ನು ಪುನರ್ ಪರಿಶೀಲಿಸಿ’ ಎಂದು ಹೈಕೋರ್ಟ್‌, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಗೆ (ಕೆಎಸ್‌ಬಿಡಬ್ಲ್ಯುಎಲ್‌) ನಿರ್ದೇಶಿಸಿದೆ.

ಕೈಬಿಡುವ ನಿರ್ಧಾರ ಪ್ರಶ್ನಿಸಿ ಬೆಂಗಳೂರಿನ ಜಯನಗರದ ವಿಜಯ್‌ ನಿಶಾಂತ್, ದೇವನಹಳ್ಳಿಯ ಎಂ.ಆರ್.ಸೀತಾರಾಂ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಬೆಂಗಳೂರು ನಗರಕ್ಕೆ ಆತು ಕೊಂಡಿರುವ ಈ ಪ್ರದೇಶವು ಸಮೃದ್ಧ ಸಸ್ಯ ಸಂಪತ್ತು ಹೊಂದಿದೆ. ಇಲ್ಲಿ ಅನೇಕ ಪ್ರಭೇದಗಳ ಪ್ರಾಣಿ, ಪಕ್ಷಿ ಮತ್ತು ಕೀಟಗಳಿವೆ. ಚಳಿಗಾಲದಲ್ಲಿ ಹಿಮಾಲಯ, ಮಧ್ಯ ಏಷ್ಯಾದಿಂದ ಪಕ್ಷಿಗಳು ವಲಸೆ ಬರುತ್ತವೆ’ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ADVERTISEMENT

ಹೆಸರುಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವವನ್ನು ಕೈಬಿಡಲು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ 2021ರ ಜನವರಿ 19ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

‘ಹೆಸರಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವು ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶವಾಗಿದೆ. ಈ ಘೋಷಿತ ಪ್ರಸ್ತಾವನೆಯಿಂದ ಹಿಂದೆ ಸರಿಯುವ ಸರ್ಕಾರದ ನಿರ್ಧಾರವು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಕಲಂ 36–ಎ ಗೆ ವಿರುದ್ಧವಾಗಿದೆ‘ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.