ADVERTISEMENT

ನಗರದಲ್ಲಿ ಕಟ್ಟೆಚ್ಚರ: ಎಸಿಪಿ, ಇನ್‌ಸ್ಪೆಕ್ಟರ್‌ಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 0:12 IST
Last Updated 5 ಆಗಸ್ಟ್ 2020, 0:12 IST
ಬುಧವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆಯುವ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳವಾರ ಪೊಲೀಸ್ ಬಿಗಿ ಬಂದೋಬಸ್ತ್ ಕಂಡುಬಂತು
ಬುಧವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆಯುವ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳವಾರ ಪೊಲೀಸ್ ಬಿಗಿ ಬಂದೋಬಸ್ತ್ ಕಂಡುಬಂತು   

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಭೂಮಿ ಪೂಜೆ ವೇಳೆ ನಗರದಲ್ಲಿ ಕೆಲ ಸಂಘಟನೆಯವರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ‌. ಇಂಥ ಸಂದರ್ಭದಲ್ಲಿ ಕೆಲ ಶಂಕಿತ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತದಳ ಈಗಾಗಲೇ ಎಚ್ಚರಿಕೆ ನೀಡಿದೆ.

ಇದೇ ಕಾರಣಕ್ಕೆ ಡಿಸಿಪಿಗಳಿಗೆ ಕೆಲ ಸೂಚನೆ ನೀಡಿರುವ ಪೊಲೀಸ್ ಕಮಿಷನರ್ ಕಮಲ್ ಪಂತ್, 'ನಿಮ್ಮ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಿ. ಅನುಮಾನ ಬಂದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ' ಎಂದು ಹೇಳಿದ್ದಾರೆ. ಭದ್ರತೆ ಜವಾಬ್ದಾರಿ ಹಾಗೂ ಅದರ ಉಸ್ತುವಾರಿಯನ್ನು ತಾವೇ ವಹಿಸಿಕೊಳ್ಳುವಂತೆಯೂ ಡಿಸಿಪಿಗಳಿಗೆ ತಿಳಿಸಿದ್ದಾರೆ.

ADVERTISEMENT

ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ಜತೆ ಮಂಗಳವಾರ ಸಭೆ ನಡೆಸಿದ ಡಿಸಿಪಿಗಳು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಲು ಚರ್ಚೆ ನಡೆಸಿದರು.

ಅಗತ್ಯವಿರುವ ಕಡೆಗಳಲ್ಲಿ ಕೆಎಸ್ಆರ್‌‌ಪಿ ಸಿಬ್ಬಂದಿಯನ್ನು ಹಾಗೂ ಗೃಹ ರಕ್ಷಕರನ್ನು ಬಳಸಿಕೊಳ್ಳಲು ತೀರ್ಮಾನಿಸಿದರು.

ಕಾಂಗ್ರೆಸ್‌ ಮೇಲೆ ಹರಿಹಾಯ್ದ ಡಿವಿಎಸ್

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಾ ಬಂದ ಮತ್ತು ಭಗವಾನ್ ರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ ಪಕ್ಷದವರು ಈಗ ಭೂಮಿ ಪೂಜೆಗೆ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ತಕರಾರು ಎತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ರಾಮಮಂದಿರ ಚಳವಳಿಯನ್ನು ಹತ್ತಿಕ್ಕಿದ್ದೂ ಅಲ್ಲದೆ, ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದೂ ಕಾಂಗ್ರೆಸ್‌ನವರೇ. ನೆಲಸಮವಾದ ಬಾಬರಿ ಕಟ್ಟಡವನ್ನು ಮತ್ತೆ ನಿರ್ಮಿಸಲು ಯತ್ನಿಸಿದ ಅವರು, ನ್ಯಾಯಾಲಯದಲ್ಲಿ ಮಂದಿರದ ವಿರುದ್ಧ ಇವರ ವಕೀಲರು ವಾದ ಮಂಡಿಸಿದ್ದರು ಎಂದು ತಿಳಿಸಿದ್ದಾರೆ.

ಸೇತು ಸಮುದ್ರ ಯೋಜನೆಯಡಿ ಭಾರತ ಶ್ರೀಲಂಕಾದ ನಡುವೆ ಇರುವ ರಾಮಾಯಣ ಕಾಲದ ಸೇತುವೆಯನ್ನು ನಾಶ ಮಾಡಲು ಮುಂದಾಗಿದ್ದೂ ಕಾಂಗ್ರೆಸ್‌ ಸರ್ಕಾರ. ಅಷ್ಟೇ ಅಲ್ಲ, ಭೂಮಿ ಪೂಜೆ ಮುಂದೂಡುವಂತೆ ನ್ಯಾಯಾಲಯದಲ್ಲಿ ಪಿಐಎಲ್‌ ಕೂಡಾ ಹಾಕಿದ್ದರು. ಇದೀಗ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸಿಗರು ಆಹ್ವಾನ ಪತ್ರ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಸರ್ಕಾರದ ಕಾರ್ಯಕ್ರಮವಲ್ಲ. ರಾಮಮಂದಿರ ನಿರ್ಮಾಣ ಟ್ರಸ್ಟ್‌ ನಡೆಸುತ್ತಿರುವ ಕಾರ್ಯಕ್ರಮ ಎಂದೂ ಸದಾನಂದಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.