ADVERTISEMENT

ರಸ್ತೆಯಲ್ಲಿ ಕಸ ಚೆಲ್ಲಿದರೆ ಕ್ರಿಮಿನಲ್ ಕೇಸ್ ಹಾಕಿ: ಹೈಕೋರ್ಟ್ ಖಡಕ್ ಆದೇಶ

ಕಲಾಪದಲ್ಲಿ ಪ್ರತಿಧ್ವನಿಸಿದ "ಡೆಕ್ಕನ್ ಹೆರಾಲ್ಡ್" ವರದಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 8:51 IST
Last Updated 5 ನವೆಂಬರ್ 2018, 8:51 IST
   

ಬೆಂಗಳೂರು: "ರಸ್ತೆಯ ಮೇಲೆ ಕಸ ಚೆಲ್ಲುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಕೇಸು ದಾಖಲಿಸಿ" ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಖಡಕ್ ಆದೇಶ ಮಾಡಿದೆ.

ಕಸ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ಹಾಜರಿದ್ದ ಹಿರಿಯ ವಕೀಲ ಡಿ.ಎನ್‌.ನಂಜುಂಡರೆಡ್ಡಿ, "ಬಹುತೇಕ 198ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡಿ ರಂಗೋಲಿ ಬಿಡಿಸಿದ್ದಾರೆ. ಆದರೆ, ಜನರು ರಂಗೋಲಿ ಮೇಲೂ ಕಸ ಚೆಲ್ಲಿ ಹೋಗುತ್ತಿದ್ದಾರೆ" ಎಂದರು.

ADVERTISEMENT

ಇದಕ್ಕೆ ಕೆಂಡಾಮಂಡಲವಾದ ದಿನೇಶ್ ಮಾಹೇಶ್ವರಿ, "ಯಾರವರು, ಗಸ್ತು ಪೊಲೀಸರು ಏನು ಮಾಡುತ್ತಿದ್ದಾರೆ. ಇಂತಹವರನ್ನು ಸುಮ್ಮನೇ ಬಿಡಬೇಡಿ. ರಂಗೋಲಿ ಮೇಲೂ ಕಸ ಚೆಲ್ಲಿದವರ ವಿರುದ್ಧ ಪೌರಾಡಳಿತ ಕಾಯ್ದೆ ಪ್ರಕಾರ ಕ್ರಿಮಿನಲ್ ಕೇಸು ಹಾಕಿ. ಶಿಕ್ಷೆಯಾಗುವಂತೆ ನೋಡಿಕೊಳ್ಳಿ. ಇದು ಕಾನೂನಿಗೆ ತೋರಿರುವ ಅಗೌರವ. ಇವರೆಲ್ಲಾ ಏನಂದುಕೊಂಡಿದ್ದಾರೆ, ಒಂಚೂರು ನಾಗರಿಕ ಪ್ರಜ್ಞೆ ಇಲ್ಲವೇ" ಎಂದು ನಂಜುಂಡರೆಡ್ಡಿ ಮತ್ತು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರನ್ನು ಖಾರವಾಗಿ ಪ್ರಶ್ನಿಸಿದರು‌.

"ಮುಂದಿನ ವಿಚಾರಣೆ ವೇಳೆಗೆ ಈ ರೀತಿ ಕಸ ಚೆಲ್ಲುವವರ ವಿರುದ್ಧ ಜರುಗಿಸುವ ಕ್ರಮಗಳ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ ಎಲ್ಲ ಅಂಕಿ ಅಂಶಗಳನ್ನು ನೀಡಿ" ಎಂದು ವಿಚಾರಣೆಯನ್ನು 15ಕ್ಕೆ ಮುಂದೂಡಿದರು.

ಸಾಮಾಜಿಕ ಕಾರ್ಯಕರ್ತನ ಅಹವಾಲಿಗೆ ಮನ್ನಣೆ

ಕಲಾಪದ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಂ.ಮಹೇಶ್ ರೆಡ್ಡಿ, "ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪರಿಹಾರಕ್ಕೆ ಬಿಬಿಎಂಪಿ ಬಳಿ ಸಮರ್ಪಕ ಸಿಬ್ಬಂದಿ ಇಲ್ಲ" ಎಂದರು.

"ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿಕೆ ಕೆಲವು ಪರಿಹಾರ ಮಾರ್ಗಗಳಿವೆ. ಅವುಗಳನ್ನು ನ್ಯಾಯಪೀಠ ಆಲಿಸಬೇಕು" ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, "ನಿಮ್ಮ ಅಹವಾಲನ್ನು ಬಿಬಿಎಂಪಿ ಅಥವಾ ಸರ್ಕಾರದ ಪರ ವಕೀಲರಿಗೆ ಲಿಖಿತವಾಗಿ ಸಲ್ಲಿಸಿ" ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.