ಬೆಂಗಳೂರು: ‘ಆರೋಗ್ಯ ವಿಜ್ಞಾನಗಳ ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ, ಕೀ ಉತ್ತರ ಒದಗಿಸುವ ಬಗೆಗಿನ ನಿರ್ಧಾರವನ್ನು ಪುನರ್ ಪರಿಶೀಲಿಸಿ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಎಚ್‌ಎಸ್) ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ಬಸವೇಶ್ವರ ನಗರದಲ್ಲಿರುವ, ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ (ಜಿಎಚ್ಎಂಸಿ) ಸ್ನಾತಕೋತ್ತರ ವಿದ್ಯಾರ್ಥಿ ಅಭಿಷೇಕ್ ಎಂ.ಸುತ್ರಾವೆ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ವಿವರಣಾತ್ಮಕ ವಿಧಾನದ ಪ್ರಶ್ನೆಗಳಿಗೆ ಕೀ ಉತ್ತರ ಒದಗಿಸುವ ಕುರಿತು ಆರ್‌ಜಿಯುಎಚ್‌ಎಸ್ ತನ್ನ ನಿರ್ಧಾರ ಪುನರ್ ಪರಿಶೀಲಿಸಬೇಕು. ಕೀ ಉತ್ತರಗಳನ್ನು ಸಿದ್ಧಪಡಿಸುವಲ್ಲಿ ಆಡಳಿತಾತ್ಮಕ ಕಷ್ಟವಿದೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು. ಈ ದಿಸೆಯಲ್ಲಿ ಮೌಲ್ಯ ಮಾಪಕರಿಗೆ ಸೂಕ್ತ ತರಬೇತಿ ನೀಡುವಂತಾಗಬೇಕು’ ಎಂದು ಹೇಳಿದೆ.
‘ಆರ್‌ಜಿಯುಎಚ್‌ಎಸ್ ಸದ್ಯ ಬಹು ಆಯ್ಕೆ (ಮಲ್ಟಿ ಚಾಯ್ಸ್ ಕ್ವಶ್ಚನ್ಸ್) ಪ್ರಶ್ನೆಗಳಿಗೆ ಮಾತ್ರವೇ ಕೀ ಉತ್ತರಗಳನ್ನು ನೀಡುತ್ತಿದೆ. ಆದರೆ, ವಿವರಣಾತ್ಮಕ ಪ್ರಶ್ನೆಗಳಿಗೆ (ಡಿಸ್ಕ್ರಿಪ್ಟೀವ್) ನೀಡಲು ಆಡಳಿತಾತ್ಮಕ ಕಷ್ಟಗಳಿವೆ ಎಂದು; ಈ ವಿಷಯವನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಮುಂದೆ ಮಂಡಿಸಿರುವುದು ಸೂಕ್ತವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವವರೇ ಮಾದರಿ ಅಥವಾ ಕೀ ಉತ್ತರಗಳನ್ನು ಸಿದ್ಧಪಡಿಸಿ ನೀಡುವಂತಾದರೆ ವಿಶ್ವವಿದ್ಯಾಲಯಕ್ಕೆ ಯಾವುದೇ ಆಡಳಿತಾತ್ಮಕ ಕಷ್ಟ ಎದುರಾಗದು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳೂ ಬಗೆಹರಿಯುತ್ತವೆ’ ಎಂದು ನ್ಯಾಯಪೀಠ ಹೇಳಿದೆ.
‘ಮರು ಪರಿಶೀಲನೆಯಿಂದ ವ್ಯಾಜ್ಯಗಳ ಸಂಖ್ಯೆಯೂ ತಗ್ಗುತ್ತದೆ. ಮಾತ್ರವಲ್ಲ, ಇದು ಮೌಲ್ಯ ಮಾಪನಗಳ ಮೇಲೆ ಅವಲಂಬಿತವಾಗಿರುವ ಶಿಕ್ಷಕ ವೃಂದಕ್ಕೂ ನೆರವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಅಸಮರ್ಪಕ ಮೌಲ್ಯ ಮಾಪನದಿಂದ ತಾನು ಅನುತ್ತೀರ್ಣನಾಗಿಲ್ಲ ಎಂಬ ವಿಶ್ವಾಸ ಮೂಡಿಸುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.