ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಹೊರಿಸಿ ಮಾನಹಾನಿಕರ ಸುದ್ದಿ ಪ್ರಕಟಿಸಿದ ಅಂದಿನ ಸಂಜೆ ದಿನಪತ್ರಿಕೆ (ಈಗ ಬೆಳಗಿನ ದಿನಪತ್ರಿಕೆ) ‘ಹಲೋ ಮೈಸೂರು’ ಸಂಪಾದಕ ಟಿ.ಗುರುರಾಜ್ ಅವರನ್ನು ಅಪರಾಧಿ ಎಂದಿರುವ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಗುರುರಾಜ್ (50) ಅವರನ್ನು ಖುಲಾಸೆಗೊಳಿಸಿ ಮೈಸೂರಿನ ಜೆ.ಎಂ.ಎಫ್.ಸಿ 3ನೇ ನ್ಯಾಯಾಲಯ 2013 ರ ಸೆಪ್ಟೆಂಬರ್ 30ರಂದು ನೀಡಿದ್ದ ಆದೇಶ ಪ್ರಶ್ನಿಸಿ ದೂರುದಾರರೂ ಆದ ಅಂದಿನ ಕೆ.ಆರ್.ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಎನ್.ಸುರೇಶ್ ಬಾಬು ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಶಿಕ್ಷೆ ವಿಧಿಸಿ ಆದೇಶಿಸಿದೆ.
‘ಪತ್ರಿಕೆಯ ವರದಿಯಲ್ಲಿ ಸುರೇಶ್ ಬಾಬು ಅವರ ಘನತೆಗೆ ಚ್ಯುತಿ ಉಂಟು ಮಾಡುವ ಪದಗಳನ್ನು ಬಳಕೆ ಮಾಡಲಾಗಿದೆ. ವ್ಯಕ್ತಿತ್ವಕ್ಕೆ ಹಾನಿ ಉಂಟು ಮಾಡಲು ಆಧಾರರಹಿತ ಆರೋಪ ಮಾಡುವುದು ಖಂಡಿತವಾಗಿಯೂ ಮಾನಹಾನಿಕರ ಅಪರಾಧ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 500ರ ಅಡಿ ಗುರುರಾಜ್ ಅಪರಾಧಿಯಾಗಿದ್ದು, ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ₹2 ಸಾವಿರ ದಂಡ ಹಾಗೂ ಕಲಂ 501ರ ಅಡಿಯ ಅಪರಾಧಕ್ಕೆ ಆರು ತಿಂಗಳ ಜೈಲುವಾಸ ಮತ್ತು ₹2 ಸಾವಿರ ದಂಡ ವಿಧಿಸಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಕರಣವೇನು?: ‘ಸುರೇಶ್ ಬಾಬು ಒಂದಂಕಿ ಲಾಟರಿ ಆಡುವುದಕ್ಕೆ ಸಹಕರಿಸುವ ಮೂಲಕ ಲಂಚ ಪಡೆದಿದ್ದಾರೆ. ಚಾಮುಂಡಿ ಬೆಟ್ಟದ ಸಮೀಪ ವಾಹನಗಳನ್ನು ಪಾರ್ಕ್ ಮಾಡಲು ಅವಕಾಶ ಮಾಡಿಕೊಟ್ಟು ಪಾರ್ಕಿಂಗ್ ಏಜೆಂಟ್‌ಗಳಿಂದಲೂ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿ 2004ರ ಆಗಸ್ಟ್ 3 ರಂದು ಹಲೋ ಮೈಸೂರು ಸಂಜೆ ದಿನಪತ್ರಿಕೆಯಲ್ಲಿ ಮಾನಹಾನಿಕರ ವರದಿ ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.