ADVERTISEMENT

ರವಿ ಪೂಜಾರಿ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 15:52 IST
Last Updated 27 ಜುಲೈ 2023, 15:52 IST
   

ಬೆಂಗಳೂರು: ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ತಿಲಕ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ರವಿ ಪೂಜಾರಿ ಅಲಿಯಾಸ್‌ ರವಿಪ್ರಕಾಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ನೇತೃತ್ವದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್ ಪರ ವಕೀಲರು, ‘ಆರೋಪಿ ರವಿ ಪೂಜಾರಿಯನ್ನು ಸೆನೆಗಲ್‌ನಿಂದ ಹಸ್ತಾಂತರ ಮಾಡಲಾಗಿದ್ದು, ಕರ್ನಾಟಕದಲ್ಲಿ 107 ಪ್ರಕರಣ ಬಾಕಿ ಇವೆ. ಮಹಾರಾಷ್ಟ್ರದಲ್ಲಿ 20, ಕೇರಳ, ಗುಜರಾತ್‌ ಮತ್ತು ರಾಜಸ್ಥಾನದಲ್ಲೂ ಪ್ರಕರಣ ದಾಖಲಾಗಿವೆ. ತನಿಖೆಗಾಗಿ ಆರೋಪಿಯನ್ನು ಬೇರೆಬೇರೆ ರಾಜ್ಯಗಳಿಗೆ ಕರೆದೊಯ್ಯುತ್ತಿರುವುದರಿಂದ ಈ ಪ್ರಕರಣದ ವಿಚಾರಣೆಯಲ್ಲಿ ತಡವಾಗಿದೆ’ ಎಂದು ವಿವರಿಸಿದ್ದರು.

ADVERTISEMENT

ಇದನ್ನು ಮಾನ್ಯ ಮಾಡದ ನ್ಯಾಯಪೀಠ, ‘ವಿಚಾರಣಾ ನ್ಯಾಯಾಲಯ ಬಹು ಹಿಂದೆಯೇ ಆರೋಪ ನಿಗದಿ ಮಾಡಿದ್ದರೂ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ, ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು. ವರ್ಷದೊಳಗೆ ವಿಚಾರಣೆ ಮುಗಿಯದಿದ್ದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಜವಾಬ್ದಾರರಾಗುತ್ತಾರೆ’ ಎಂದು ಎಚ್ಚರಿಸಿದೆ.

ಅರ್ಜಿದಾರರ ಪರ ವಕೀಲ ದಿಲ್‌ ರಾಜ್‌ ಜೂಡ್‌ ರೋಹಿತ್‌ ಸಿಕ್ವೆರಾ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.