ADVERTISEMENT

ಹಿಜಾಬ್‌ ವಿವಾದ | ನಾಳೆ ಹೈಕೋರ್ಟ್ ತೀರ್ಪು; ಬೆಂಗಳೂರಿನಾದ್ಯಂತ ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 16:02 IST
Last Updated 14 ಮಾರ್ಚ್ 2022, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಿಜಾಬ್‌ ನಿರ್ಬಂಧ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಲಾಗಿರುವ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಸ್ತೃತ ನ್ಯಾಯಪೀಠವು ಮಂಗಳವಾರ ಪ್ರಕಟಿಸಲಿದೆ. ತೀರ್ಪು ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಾದ್ಯಂತ ಮಾರ್ಚ್ 15ರ ಬೆಳಿಗ್ಗೆ 6ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆಯು ಮಾರ್ಚ್‌ 21ರ ರಾತ್ರಿ 12ರ ವರೆಗೂ ಮುಂದುವರಿಯಲಿದೆ. ಈ ಸಂಬಂಧ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರು ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಿದ್ದಾರೆ.

ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ. ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಮಹಿಳಾ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದಾರೆ.

ADVERTISEMENT

ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇಂಟರ್ನಲ್‌ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ. ಆದರೆ, ಬಾಹ್ಯ ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಉಡುಪಿ: ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ

ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ರಜೆ ಘೋಷಿಸಿದ್ದಾರೆ.

ಅಹಿತಕರ ಘಟನೆಗಳು ನಡೆಯದಂತೆ ಶಾಲಾ ಕಾಲೇಜುಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.