ADVERTISEMENT

ಹಿಂದಿ ಹೇರಿಕೆ: ಒಂದು ಲಕ್ಷ ಕರಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 22:46 IST
Last Updated 17 ಡಿಸೆಂಬರ್ 2024, 22:46 IST
   

ಬೆಂಗಳೂರು: ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟವು ಹಿಂದಿ ಹೇರಿಕೆ ವಿರುದ್ಧ ಜಾಗೃತಿ ಮೂಡಿಸಲು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಲಕ್ಷ ಕರಪತ್ರಗಳನ್ನು ವಿತರಿಸಲಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಪಾರ್ವತೀಶ ಬಿಳಿದಾಳೆ, ‘ಭಾರತವು ಹಲವಾರು ಭಾಷೆ, ಸಂಸ್ಕೃತಿ ಹಾಗೂ ಜೀವನಕ್ರಮ ಒಳಗೊಂಡಿರುವ ವಿಭಿನ್ನ ಸಮುದಾಯಗಳ ಒಂದು ಒಕ್ಕೂಟವಾಗಿದೆ. ಹಿಂದಿ ಹೇರಿಕೆಯ ಮೂಲಕ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಜನಜಾಗೃತಿ ಮೂಡಬೇಕಿದೆ. ಆದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ಕರಪತ್ರ ವಿತರಣೆ ಮೂಲಕ ಹಿಂದಿ ಹೇರಿಕೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

‘ರಾಜ್ಯ ಸರ್ಕಾರವು ತ್ರಿಭಾಷಾ ಶಿಕ್ಷಣ ನೀತಿಯನ್ನು ಕೂಡಲೇ ರದ್ದುಪಡಿಸಿ, ದ್ವಿಭಾಷಾ ನೀತಿ ಜಾರಿಗೆ ತರಬೇಕಿದೆ. ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಂಚಿಕೆಯಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡಬೇಕಿದೆ. ಈ ವಿಚಾರಗಳನ್ನು ಒಳಗೊಂಡ ಕರಪತ್ರಗಳನ್ನು ಸಮ್ಮೇಳನದ ಅವಧಿಯಲ್ಲಿ ವಿತರಿಸಲಾಗುತ್ತದೆ. ನೂರಾರು ಕನ್ನಡಪರ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಈ ಘೋಷ ವಾಕ್ಯಗಳಿರುವ ಟೀ ಶರ್ಟ್‌ಗಳನ್ನು ಧರಿಸಿ, ಕರಪತ್ರ ನೀಡುತ್ತಾರೆ’ ಎಂದು ಹೇಳಿದರು.

ADVERTISEMENT

ಕನ್ನಡ ಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ, ಕವಿ ಕಾ.ವೆಂ. ಶ್ರೀನಿವಾಸಮೂರ್ತಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಶೆ.ಬೊ.ರಾಧಾಕೃಷ್ಣ, ಶಂಕರ್ ಹೂಗಾರ್, ಯಮುನಾ ಮೈಸೂರು, ನಾವು ದ್ರಾವಿಡ ಕನ್ನಡ ಕನ್ನಡಿಗರು ಚಳವಳಿಯ ಅಭಿ ಗೌಡ, ರೈತ ಸಂಘಟನೆಯ ವೀರಸಂಗಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.