ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಜೈನ ಏಕ್ತಾ ಮಂಚ್ ವತಿಯಿಂದ ಹೋಳಿ ಹಬ್ಬ ಆಚರಿಸಲಾಯಿತು.
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ನಗರದ ವಿವಿಧೆಡೆ ಬಣ್ಣದ ಹಬ್ಬ ಹೋಳಿಯನ್ನು ಶುಕ್ರವಾರ ಸಡಗರದಿಂದ ಆಚರಿಸಲಾಯಿತು. ಬಿಸಿಲಿನ ನಡುವೆಯೂ ಮಕ್ಕಳು, ಯುವಕರು, ಹಿರಿಯರು, ಕುಟುಂಬದವರೊಂದಿಗೆ ದಿನಪೂರ್ತಿ ಬಣ್ಣ ಎರಚಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯ, ಮನೆ, ಶಾಲಾ–ಕಾಲೇಜು, ಹೋಟೆಲ್‌ಗಳು, ಮೈದಾನಗಳಲ್ಲಿ ಪರಸ್ಪರ ಬಣ್ಣ ಹಚ್ಚಿ ಕುಣಿದಾಡಿದರು. ವಿವಿಧ ಬಡಾವಣೆಗಳಲ್ಲಿಯೂ ಮತಭೇದ ಮರೆತು ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣಗಳ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡರು. ಹಲವು ರಸ್ತೆಗಳು ಬಣ್ಣದೋಕುಳಿಯಲ್ಲಿ ಮಿಂದವು.
ಚಿಕ್ಕಮಕ್ಕಳು ಪಿಚಕಾರಿಯಿಂದ ದೊಡ್ಡವರಿಗೆ ಬಣ್ಣ ಎರೆಚುತ್ತಿರುವುದು ಸಾಮಾನ್ಯವಾಗಿ ಕಂಡುಬಂತು. ಬಗೆಬಗೆಯ ಬಣ್ಣಗಳಲ್ಲಿ ಮಿಂದೆದ್ದು ಗುರುತು ಸಿಗಲಾರದಂತೆ ಆಗಿದ್ದರು. ಈ ಸಂಭ್ರಮಕ್ಕೆ ಸಂಗೀತ ಮತ್ತಷ್ಟು ಉತ್ಸಾಹ ತುಂಬಿತು.
ನಗರದಲ್ಲಿ ನೆಲಸಿರುವ ಉತ್ತರ ಕರ್ನಾಟಕ ಭಾಗದ ಜನ ಕಾಮದಹನ ಮಾಡಿ, ಬಣ್ಣದೋಕುಳಿ ಆಡಿದರು. ಖಾಸಗಿ ಕಂಪನಿಗಳ ಕಚೇರಿಗಳಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು.
ಕೆಲವು ವಸತಿ ಸಮುಚ್ಚಯಗಳು ಹಾಗೂ ಮನೆಗಳಲ್ಲಿ ಪರಸ್ಪರ ಬಣ್ಣ ಹಚ್ಚಿ, ಸಿಹಿ ಸವಿದರು. ಮತ್ತೆ ಕೆಲ ಯುವಕರು ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ದ್ವಿಚಕ್ರ ವಾಹನದಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಹೋಳಿ ಆಚರಿಸಿದರು. ಹಿರಿಯರು ಸಹ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.
ಚಿಕ್ಕಪೇಟೆಯಲ್ಲಿ ವ್ಯಾಪಾರಿಗಳು, ವಿಜಯನಗರ, ದಾಸರಹಳ್ಳಿ, ದೀಪಾಂಜಲಿನಗರ, ದೊಮ್ಮಲೂರು, ಇಂದಿರಾನಗರ, ಕಮ್ಮಗೊಂಡನಹಳ್ಳಿ, ಯಲಹಂಕ, ರಾಜಾಜಿನಗರ, ಪೀಣ್ಯ, ಸುಮ್ಮನಹಳ್ಳಿ, ವಿ.ವಿ.ಪುರಂ, ವಸಂತನಗರ, ಕೆಂಗೇರಿ, ನಾಯಂಡಹಳ್ಳಿ, ಬನಶಂಕರಿ, ಬಸನಗುಡಿ, ಜೆ.ಪಿ.ನಗರ ಸೇರಿದಂತೆ ಹಲವು ಬಣ್ಣ ಎರಚಿ ಖುಷಿಪಟ್ಟರು.
ಚರ್ಚ್ ಸ್ಟ್ರೀಟ್, ಶೇಷಾದ್ರಿಪುರ, ಕುಮಾರಕೃಪಾ ವೃತ್ತದಲ್ಲಿ ಯುವಕ–ಯುವತಿಯರು ಬಣ್ಣದಾಟದಲ್ಲಿ ತೊಡಗಿದ್ದರು. ಡಿ.ಜೆ ಸಂಗೀತಕ್ಕೆ ಮೈಮರೆತು ಯುವಜನರು ಕುಣಿದು ಕುಪ್ಪಳಿಸಿದರು.
ಬಣ್ಣದೋಕುಳಿ ಮಿಂದೆದ್ದ ಬಂದವರಿಗೆ ಮೆಟ್ರೊದಲ್ಲಿ ಪ್ರಯಾಣಿಸಲು ಅವಕಾಶ ನೀಡಲಿಲ್ಲ. ಮೈ ಮತ್ತು ಬಟ್ಟೆ ಮೇಲೆ ಬಣ್ಣ ಸುರಿದುಕೊಂಡು ಬಂದಿದ್ದವರನ್ನು ಮೆಟ್ರೊ ಸಿಬ್ಬಂದಿ ಪ್ರವೇಶ ದ್ವಾರದಲ್ಲೇ ತಡೆದು ವಾಪಸ್ ಕಳುಹಿಸಿ ದೃಶ್ಯ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.