ADVERTISEMENT

'ಹನಿಟ್ರ್ಯಾಪ್‌' ಬಲೆಗೆ ಗುತ್ತಿಗೆದಾರ: ಯುವತಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 16:13 IST
Last Updated 15 ಅಕ್ಟೋಬರ್ 2021, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಗುತ್ತಿಗೆದಾರರೊಬ್ಬರನ್ನು ‘ಹನಿಟ್ರ್ಯಾಪ್’ ಜಾಲದೊಳಗೆ ಸಿಲುಕಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿ ಕಾವ್ಯಾ ಎಂಬಾಕೆಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ಗುತ್ತಿಗೆದಾರರೊಬ್ಬರು 'ಹನಿಟ್ರ್ಯಾಪ್' ಜಾಲದ ಬಗ್ಗೆ ದೂರು ನೀಡಿದ್ದರು. ಅದರನ್ವಯ ಆರೋಪಿ ಕಾವ್ಯಾಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದ ಇಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪದವೀಧರೆಯಾದ ಯುವತಿ, ವಿಜಯನಗರದಲ್ಲಿ ವಾಸವಿದ್ದಳು. ‘ಹರ್ಬಲ್ ಲೈಫ್’ ಉತ್ಪನ್ನಗಳ ಮಾರಾಟ ಪ್ರತಿನಿಧಿ ಆಗಿ ಕೆಲಸ ಮಾಡುತ್ತಿದ್ದಳು. ಕೆಲ ತಿಂಗಳ ಹಿಂದೆ ಉತ್ಪನ್ನಗಳನ್ನು ಮಾರುತ್ತ ದೂರುದಾರರ ಮನೆಗೆ ಹೋಗಿದ್ದಳು. ಉತ್ಪನ್ನಗಳನ್ನು ಖರೀದಿಸುವಂತೆ ಕೋರಿದ್ದಳು. ದೂರುದಾರ ಉತ್ಪನ್ನಗಳನ್ನು ಖರೀದಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತುಕತೆ ಆಗಿ, ಪರಸ್ಪರ ಮೊಬೈಲ್ ನಂಬರ್ ವಿನಿಮಯವಾಗಿತ್ತು.’

ADVERTISEMENT

‘ಇಬ್ಬರೂ ಮೊಬೈಲ್‌ನಲ್ಲಿ ಚಾಟಿಂಗ್ ಆರಂಭಿಸಿದ್ದರು. ಸಲುಗೆಯೂ ಬೆಳೆದಿತ್ತು. ಇಬ್ಬರೂ ಕನಕಪುರ ಬಳಿಯ ರೆಸಾರ್ಟ್ ಹಾಗೂ ಹಲವೆಡೆ ಸುತ್ತಾಡಿದ್ದರು. ಖಾಸಗಿ ಕ್ಷಣಗಳನ್ನೂ ಕಳೆದಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಇತ್ತೀಚೆಗಷ್ಟೇ ದೂರುದಾರನಿಗೆ ಕರೆ ಮಾಡಿ ನಾಗರಬಾವಿ ಬಳಿ ಕರೆಸಿಕೊಂಡಿದ್ದ ಯುವತಿ, ‘ನಿಮ್ಮ ಜೊತೆಗಿನ ಖಾಸಗಿ ಕ್ಷಣದ ಫೋಟೊ ಹಾಗೂ ವಿಡಿಯೊಗಳು ನನ್ನ ಬಳಿ ಇವೆ. ನಾನು ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದಿದ್ದಳು. ಇದಕ್ಕೆ ಒಪ್ಪದ ಗುತ್ತಿಗೆದಾರ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಮೂಲಗಳು ವಿವರಿಸಿವೆ.

ಶಾಪಿಂಗ್ ಮಾಡಿದ್ದಳು: ‘ಗುತ್ತಿಗೆದಾರ ಹಾಗೂ ಯುವತಿ, ಹಲವು ಬಾರಿ ಶಾಪಿಂಗ್ ಸಹ ಮಾಡಿದ್ದರು. ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ಯುವತಿ ಖರೀದಿಸಿದ್ದರು. ಅದಕ್ಕೆ ಗುತ್ತಿಗೆದಾರ ಹಣ ನೀಡಿದ್ದ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.