ದಾಬಸ್‌ಪೇಟೆ: ಸೋಂಪುರ ಹೋಬಳಿ ಶಿವಗಂಗೆಯ ಹೊನ್ನಾದೇವಿ ಬ್ರಹ್ಮ ರಥೋತ್ಸವವು ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶಿವಗಂಗೆ ಬೆಟ್ಟದ ಮೇಲಿನ ಹೊನ್ನಾದೇವಿ ದೇವಾಲಯದಲ್ಲಿ ಅಮ್ಮನವರ ಮೂರ್ತಿಗೆ ಬೆಳಿಗ್ಗೆ ಪೂಜೆ ಅಭಿಷೇಕ ನಡೆಯಿತು. ಉತ್ಸವಗಳು ನಡೆದವು.
ಅಲಂಕೃತ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ನಡೆಮುಡಿಯಿಂದ ಶಾಸ್ತ್ರೋಕ್ತವಾಗಿ ಮಂಗಳವಾದ್ಯದಲ್ಲಿ ಭಕ್ತರ ಜಯಘೋಷದೊಂದಿಗೆ ತಂದು ವೇದ ಮಂತ್ರ ಘೋಷಗಳೊಂದಿಗೆ ರಥದಲ್ಲಿ ಕೂರಿಸಲಾಯಿತು.
ತೇರನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ರಥವನ್ನು ಮುಂದೆ ಎಳೆದರು. ರಥ ಮುಂದೆ ಸಾಗುತ್ತಿದಂತೆ ಭಕ್ತರು ತಮ್ಮ ಬಾಳೆಹಣ್ಣು ಎಸೆದು ಹರಕೆಗಳನ್ನು ತೀರಿಸಿದರು. ಜನಪದ ಕಲಾತಂಡಗಳಾದ ವೀರಗಾಸೆ, ನಂದಿಧ್ವಜ, ಕರಡಿ ವಾದ್ಯ, ಬೃಹತ್ ಗೊಂಬೆಗಳ ಕುಣಿತ ಮೆರುಗು ನೀಡಿದವು. ಸ್ಥಳೀಯರು ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ದೇವಾಲಯದ ಸಮಿತಿ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.