ರಾಜರಾಜೇಶ್ವರಿ ನಗರ: ಉಲ್ಲಾಳು ವಾರ್ಡ್‌ನ ಗಾಂಧಿ ನಗರ ಹೊಸಕೆರೆ ಕೆರೆಗೆ ಕಸ, ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಕೆರೆಯ ನೀರು ಮಲಿನಗೊಂಡು, ಕಪ್ಪು ಬಣ್ಣಕ್ಕೆ ತಿರುಗಿದೆ.
ಅತಿಯಾದ ತ್ಯಾಜ್ಯದ ಕಾರಣ ದುರ್ವಾಸನೆ ಬೀರುತ್ತಿದ್ದು, ಸುತ್ತಮುತ್ತಲಿನ ಜನ ಜೀವನ ಸಾಗಿಸುವುದು ದುಸ್ತರವಾಗಿದೆ. ಕೆರೆ ಸುತ್ತಮುತ್ತ ವಾಸಿಸುವ ನಾಗರಿಕರು ಮೂಗು ಮುಚ್ಚಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ವೇಳೆ ಲಾರಿಗಳಲ್ಲಿ ತಂದು ಕೆರೆಯ ಒಡಲು, ಬದಿ ಹಾಗೂ ಏರಿ ಮೇಲೆ ತ್ಯಾಜ್ಯವನ್ನು ಸುರಿದು ಹೋಗಲಾಗುತ್ತಿದೆ. ಈ ಬಗ್ಗೆ ಬಿಡಿಎ, ಜಿಬಿಎ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ನಿಯಂತ್ರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು.
ಕೆರೆ ಸಮೀಪವಿರುವ ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ, ಜ್ಞಾನಭಾರತಿ ಬಡಾವಣೆ, ಗಾಂಧಿನಗರ ನಿವಾಸಿಗಳು ಕೆಟ್ಟ ವಾಸನೆಯಿಂದ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡೇ ಇರುವಂತಾಗಿದೆ.
‘ಗಾಳಿ ಬೀಸಿದಾಗ ದುರ್ವಾಸನೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡರು.
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೋಟ್ಯಂತರ ರೂಪಾಯಿ ಖರ್ಚುಮಾಡಿ ಕೆರೆ ಅಭಿವೃದ್ಧಿಪಡಿಸಿದೆ. ಆದರೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ. ಜೋರು ಮಳೆ ಸುರಿದಾಗ ಮಲ್ಲತ್ತಹಳ್ಳಿ, ಮರಿಯಪ್ಪನ ಪಾಳ್ಯ, ಪಾಪರೆಡ್ಡಿಪಾಳ್ಯ, ಡಿ ಗ್ರೂಪ್ ಲೇಔಟ್, ಭುವನೇಶ್ವರಿ ನಗರ, ಉಲ್ಲಾಳು, ಮಾರುತಿನಗರ, ದೊಡ್ಡಗೊಲ್ಲರಹಟ್ಟಿ ಸುತ್ತಮುತ್ತಲಿನ ಬಡಾವಣೆಗಳ ಒಳ ಚರಂಡಿ ನೀರು, ತ್ಯಾಜ್ಯ ಸಹ ಕೆರೆಗೆ ಸೇರುತ್ತಿದೆ.
ಕೆರೆಯ ದಡ ಬಳಿಯೇ ವ್ಯಕ್ತಿಯೊಬ್ಬರು ನೂರಾರು ನಾಯಿಗಳನ್ನು ಸಾಕುತ್ತಿದ್ದಾರೆ. ಸತ್ತ ನಾಯಿಗಳನ್ನು ಕೆರೆಗೆ ಬಿಸಾಡುತ್ತಿದ್ದು, ಕೊಳೆತು ತೇಲುತ್ತಿವೆ.
‘ರಾತ್ರಿ ವೇಳೆ ಹೊಸಕೆರೆ ಕೆರೆಗೆ ಕೋಳಿ, ಕುರಿ, ಮೇಕೆ ತ್ಯಾಜ್ಯಗಳನ್ನು ಚೀಲಗಳಲ್ಲಿ ತಂದು ಸುರಿಯಲಾಗುತ್ತಿದೆ. ಕೆಲವರು ಕೆರೆ ಆವರಣ ಹಾಗೂ ರಸ್ತೆಗಳಲ್ಲೇ ಕೋಳಿ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಪಾಲಿಕೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ದೂರಿದರು.
ಸಾರ್ವಜನಿಕರ ಆಕ್ರೋಶ
ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ ಮೊದಲನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ‘ಸುಮಾರು 54 ಎಕರೆ ವಿಸ್ತೀರ್ಣವಿದ್ದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, 34 ಎಕರೆಗೆ ಕುಸಿದಿದೆ. ಕೆರೆಯಿಂದ ಬರುವ ದುರ್ನಾತ ಹಾಗೂ ಸುತ್ತಮುತ್ತಲ ಅಡ್ಡ ರಸ್ತೆಗಳಲ್ಲಿ ಮಾಂಸದ ತ್ಯಾಜ್ಯ ಸುರಿಯಲಾಗುತ್ತಿದೆ. ಇದರ ರುಚಿ ನೋಡಿರುವ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿವೆ. ಕೆರೆಯ ಕಲುಷಿತ ನೀರನ್ನು ಕುಡಿದು ಪಕ್ಷಿಗಳು, ಜಲಚರಗಳು ಸಾವನ್ನಪ್ಪುತ್ತಿವೆ’ ಎಂದು ಆರೋಪಿಸಿದರು.
‘ಕೆರೆ ಅಭಿವೃದ್ದಿಯಾಗಿದೆ. ಕೆರೆಯ ಏರಿ ಮೇಲೆ ವಾಯುವಿಹಾರ ಮಾಡಲು ಚೆನ್ನಾಗಿದೆ. ಕೆರೆಗೆ ತ್ಯಾಜ್ಯ ಮತ್ತು ಕಲುಷಿತ ನೀರು ಸೇರುವುದನ್ನು ಅಧಿಕಾರಿಗಳು ತಡೆಟ್ಟಬೇಕು’ ಎಂದು ಟೋಯೋಟಾ ಕಂಪನಿಯ ಉಪ ವ್ಯವಸ್ಥಾಪಕ ಡಿ. ಮನೋಜ್ ಕುಮಾರ್ ಹೇಳಿದರು.
‘ಡಬಲ್ ರಸ್ತೆಯ ಸೇತುವೆ ಬಳಿ ಕಬ್ಬಿಣದ ಮೆಷ್ ಅಳವಡಿಸಿದರೆ ಕೆರೆಗೆ ಮಳೆ ನೀರಿನ ಜೊತೆಗೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಸೇರುವುದಿಲ್ಲ. ಮೇಕೆ, ಕುರಿ, ಕೋಳಿ, ಸತ್ತ ನಾಯಿಗಳನ್ನು ಕೆರೆಗೆ ಎಸೆಯದಂತೆ ಕ್ರಮ ತೆಗೆದುಕೊಂಡು ಕೆರೆ ಉಳಿಸಬೇಕು ಇಲ್ಲದಿದ್ದರೆ ಜಿಬಿಎ ಪಾಲಿಕೆಯ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ’ ಎಂದು ಸಮಾಜಿಕ ಕಾರ್ಯಕರ್ತ ಎನ್.ಸಿ. ಕುಮಾರ್ ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಎನ್. ಕದಿರಪ್ಪ ಮಾತನಾಡಿ, ‘ಕೆರೆ ಒಡಲಿಗೆ ತ್ಯಾಜ್ಯ ಸೇರುವುದನ್ನು ತಡೆಗಟ್ಟಿ, ಕೆರೆ ಉಳಿಸಬೇಕು’ ಎಂದರು.
ಜಿಬಿಎ(ಬಿಬಿಎಂಪಿ) ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಲ್. ಗೀತಾ ಮಾತನಾಡಿ, ‘ಮಳೆ ಬಂದಾಗ ಬೃಹತ್ ನೀರುಗಾಲುವೆಯಿಂದ ತ್ಯಾಜ್ಯ ಬರುತ್ತಿದೆ. ಅದನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಕೆರೆಗೆ ಒಳಚರಂಡಿ ನೀರು ಸೇರದಂತೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.