ADVERTISEMENT

ಆತಿಥ್ಯ ವಲಯದಲ್ಲಿ 50,000 ಉದ್ಯೋಗ: ಸಿ.ಎಂ ಸಿದ್ದರಾಮಯ್ಯ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟ ಸಮಾವೇಶ ಆರಂಭ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 19:53 IST
Last Updated 18 ಸೆಪ್ಟೆಂಬರ್ 2025, 19:53 IST
ಬೆಂಗಳೂರಿನಲ್ಲಿಗುರುವಾರ ಆರಂಭವಾದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು
ಬೆಂಗಳೂರಿನಲ್ಲಿಗುರುವಾರ ಆರಂಭವಾದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು   

ಬೆಂಗಳೂರು: ಪ್ರವಾಸಿ ಮಿತ್ರ ಯೋಜನೆಯಡಿ ಕರ್ನಾಟಕದ ಆತಿಥ್ಯ ವಲಯದಲ್ಲಿ ಒಂದು ವರ್ಷದಲ್ಲಿ 50,000 ಯುವಕರನ್ನು ಕೌಶಲಗೊಳಿಸಿ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಆರಂಭಗೊಂಡ ಭಾರತೀಯ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟದ 55ನೇ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯದಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ಪ್ರವಾಸೋದ್ಯಮ ವಲಯದ ಬೆಳವಣಿಗೆಯು 12 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಆತಿಥ್ಯ ವಲಯವೇ ಈಗ ನಮ್ಮ ಆರ್ಥಿಕತೆಗೆ ಸುಮಾರು ₹25,000 ಕೋಟಿ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ADVERTISEMENT

‘ಪ್ರವಾಸೋದ್ಯಮದ ಐದು ವರ್ಷದ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು ಪ್ರತ್ಯೇಕ ನೀತಿಯನ್ನು ಕಳೆದ ವರ್ಷ ಜಾರಿಗೆ ತಂದಿದ್ದೇವೆ. ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಆತಿಥ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ಈ ನೀತಿಯ ಉದ್ದೇಶವಾಗಿದೆ. 2029ರ ವೇಳೆಗೆ 1.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ₹8,000 ಕೋಟಿ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವ ಗುರಿಯಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ 54 ಹೊಸ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಿಗೆ ಸಹಾಯಧನವನ್ನು ನೀಡಲು ಅನುಮತಿ ನೀಡಲಾಗಿದೆ. ಇದಲ್ಲದೇ ಕರ್ನಾಟಕದ ಕರಾವಳಿ ಪ್ರವಾಸೋದ್ಯಮದ ಆಕರ್ಷಣೆ ಹೆಚ್ಚಿಸಲು ₹200 ಕೋಟಿ ವಿನಿಯೋಗಿಸುತ್ತಿದ್ದೇವೆ’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಬೆಂಗಳೂರು ನಗರ ಜಗತ್ತಿನ ಪ್ರಮುಖ ತಂತ್ರಜ್ಞಾನ, ಉದ್ಯಮ ಹಾಗೂ ನಾವೀನ್ಯ ನಗರಿಯಾಗಿ ಬೆಳೆದಿದೆ. 25 ಲಕ್ಷ ಎಂಜಿನಿಯರ್‌ಗಳು ಇಲ್ಲಿದ್ದಾರೆ. ಈ ನಗರದಲ್ಲಿ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದರೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ’ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ‘ಪ್ರವಾಸೋದ್ಯಮದ ಭಾಗವಾಗಿರುವ ಆತಿಥ್ಯ ವಲಯದ ಪ್ರಗತಿಗೆ ಪೂರಕವಾಗಿ ಸರ್ಕಾರವು ಸಹಾಯಧನ, ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಉಪಯೋಗವನ್ನು ಉದ್ಯಮ ವಲಯ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೇಂದ್ರ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಒಕ್ಕೂಟದ ಅಧ್ಯಕ್ಷ ಕೆ.ಶಾಮರಾಜು, ಸಮಾವೇಶದ ಆಯೋಜನಾ ಸಮಿತಿ ಅಧ್ಯಕ್ಷ ಕೆ.ರವಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.