ADVERTISEMENT

ಕೋವಿಡ್‌ ಕೇಂದ್ರಕ್ಕೆ ಹಾಸ್ಟೆಲ್‌: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 22:32 IST
Last Updated 30 ಜೂನ್ 2020, 22:32 IST

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ ಕೊಠಡಿಗಳನ್ನು ‘ಕೋವಿಡ್‌ ಆರೈಕೆ ಕೇಂದ್ರ’ಗಳಾಗಿ ಮಾಡುವ ಉದ್ದೇಶದಿಂದ ತಮ್ಮನ್ನು ತೆರವುಗೊಳಿಸಿದ ಕ್ರಮವನ್ನು ವಿರೋಧಿಸಿ ಬೆಂಗಳೂರು ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಕ್ಯಾಂಪಸ್‌ನಲ್ಲಿರುವ ಕೆಲವು ಹಾಸ್ಟೆಲ್‌ ಕಟ್ಟಡಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲು ವಶಕ್ಕೆ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಈ ಬಗ್ಗೆ ಸೋಮವಾರ ಸಂಜೆ ಮಾಹಿತಿ ನೀಡಿದ್ದ ವಿಶ್ವವಿದ್ಯಾಲಯದ ಅಧಿಕಾರಿಗಳು, ಹಾಸ್ಟೆಲ್‌ಗೆ ಬಂದು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಮಂಗಳವಾರ ಬೆಳಿಗ್ಗೆ ಕ್ಯಾಂಪಸ್‌ನಲ್ಲಿ ಗುಂಪುಗೂಡಿದ ವಿದ್ಯಾರ್ಥಿಗಳು, ಕೊಠಡಿ ತೆರವುಗೊಳಿಸಲು ವಿರೋಧ ವ್ಯಕ್ತಪಡಿಸಿದರು.

ಮಾರ್ಚ್‌ ನಂತರ ತರಗತಿಗಳು ನಡೆಯದೇ ಇದ್ದುದರಿಂದ ಅನೇಕ ವಿದ್ಯಾರ್ಥಿಗಳು ತವರಿಗೆ ಮರಳಿದ್ದು, ಅಧಿಕಾರಿಗಳ ಸೂಚನೆಯಂತೆ ಮಂಗಳವಾರ ಬೆಳಿಗ್ಗೆ ಹಾಸ್ಟೆಲ್‌ಗೆ ಬಂದಿದ್ದರು. ಆದರೆ, ಉತ್ತರ ಕರ್ನಾಟಕ ಜಿಲ್ಲೆಯ ಹಲವು ವಿದ್ಯಾರ್ಥಿಗಳಿಗೆ ಬರಲು ಸಾಧ್ಯವಾಗಿಲ್ಲ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಹಾಸ್ಟೆಲ್‌ ವಿದ್ಯಾರ್ಥಿನಿಯೊಬ್ಬಳು, ‘ಸ್ನೇಹಿತೆಯೊಬ್ಬಳು ಮಾಹಿತಿ ನೀಡಿದ ಕಾರಣ ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿರುವ ನನಗೆ ಬರಲು ಸಾಧ್ಯವಾಯಿತು. ಕೊನೆಕ್ಷಣದಲ್ಲಿ ವಿಷಯ ಗೊತ್ತಾಗಿರುವುದರಿಂದ ಸಾಮಾನುಗಳನ್ನೆಲ್ಲ ಸಾಗಿಸಲು ವ್ಯವಸ್ಥೆ ಮಾಡುವುದು ಕಷ್ಟ’ ಎಂದಳು.

ವಿದ್ಯಾರ್ಥಿಗಳ ಮನವೊಲಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಾಮಾನುಗಳನ್ನು ತೆಗೆದಿಡಲು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ‘ಹೆಚ್ಚು ಬೆಲೆಯ ವಸ್ತುಗಳು ಮತ್ತು ಪ್ರಮಾಣಪತ್ರಗಳನ್ನು ಮಾತ್ರ ತೆಗೆದುಕೊಳ್ಳಿ. ಉಳಿದ ವಸ್ತುಗಳನ್ನು
ಸುರಕ್ಷಿತವಾಗಿಡಲು ವ್ಯವಸ್ಥೆ ಮಾಡುತ್ತೇವೆ’ ಎಂದು ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

‘ಕೋವಿಡ್‌ ಆರೈಕೆ ಕೇಂದ್ರವಾಗಿ ಬಳಸಲು 750 ಬೆಡ್‌ಗಳಿರುವ ಎರಡು ಹಾಸ್ಟೆಲ್‌ ಕಟ್ಟಡಗಳನ್ನು ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಈ ಪೈಕಿ, ಒಂದು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿದ್ದು ಅದನ್ನು ಖಾಲಿ ಮಾಡಿಸಬೇಕಿದೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿದ್ದ ಮತ್ತೊಂದು ಹಾಸ್ಟೆಲ್‌ ಖಾಲಿ ಇದೆ’ ಎಂದೂ ವೇಣುಗೋಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.