ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳವು ಮಾಡಿದ್ದ ಚಿನ್ನದ ನೆಕ್ಲೆಸ್ ಅನ್ನು ಧರಿಸಿಕೊಂಡು ವಾಟ್ಸ್‌ಆ್ಯಪ್ ಡಿ.ಪಿಯಲ್ಲಿ ಫೋಟೊ ಹಾಕಿಕೊಂಡಿದ್ದ ಆರೋಪಿಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾರತ್ತಹಳ್ಳಿಯ ನಿವಾಸಿ ರೇಣುಕಾ (38) ಬಂಧಿತೆ. ಆರೋಪಿಯಿಂದ ₹5 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಮಾರತ್ತಹಳ್ಳಿಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಆರೋಪಿ ಹಲವು ತಿಂಗಳಿಂದ ಮನೆಗೆಲಸ ಮಾಡುತ್ತಿದ್ದರು. ಮಾಲೀಕರ ಗಮನಕ್ಕೆ ಬಾರದಂತೆ ಕಬೋರ್ಡ್‌ನಲ್ಲಿದ್ದ ಚಿನ್ನದ ನೆಕ್ಲೆಸ್ ಅನ್ನು ಕಳವು ಮಾಡಿದ್ದರು. ಕೆಲವು ದಿನಗಳ ಹಿಂದೆ ಕಬೋರ್ಡ್ ಪರಿಶೀಲನೆ ನಡೆಸಿದಾಗ ನೆಕ್ಲೆಸ್ ಇರಲಿಲ್ಲ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸೇರಿದಂತೆ ನಾಲ್ವರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ, ಮಾಲೀಕರು ಎಚ್‌ಎಎಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
‘ಪೊಲೀಸರು ನಾಲ್ವರು ಕೆಲಸಗಾರರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದರು. ಆದರೆ, ಸುಳಿವು ಸಿಕ್ಕಿರಲಿಲ್ಲ. ಇತ್ತೀಚೆಗೆ ರೇಣುಕಾ ಕದ್ದ ನೆಕ್ಲೆಸ್ ಅನ್ನು ಧರಿಸಿಕೊಂಡು ಫೋಟೊ ತೆಗೆಸಿ ಅದನ್ನು ತನ್ನ ಡಿ.ಪಿಯಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಮನೆ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಬಾಯ್ಬಿಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.