ಪೀಣ್ಯ ದಾಸರಹಳ್ಳಿ: ‘ಒಂಟಿ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಗೆ ಹಂತ ಹಂತವಾಗಿ ಸರ್ಕಾರ ₹ 5 ಲಕ್ಷ ಸಹಾಯಧನ ನೀಡುತ್ತಿದ್ದು, ಇದನ್ನು ಪಡೆಯುವುದಕ್ಕಾಗಿ ಯಾರಿಗೂ ಲಂಚ ಕೊಡಬೇಡಿ' ಎಂದು ಶಾಸಕ ಎಸ್. ಮುನಿರಾಜು ಫಲಾನುಭವಿಗಳಿಗೆ ಮನವಿ ಮಾಡಿದರು.
ಶೆಟ್ಟಿಹಳ್ಳಿಯ ತಮ್ಮ ಕಚೇರಿ ಆವರಣದಲ್ಲಿ ಒಂಟಿ ಮನೆ ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
‘ಕಟ್ಟಡ ನಿರ್ಮಾಣದ ನಾಲ್ಕು ಹಂತಗಳಲ್ಲಿ ಸರ್ಕಾರದಿಂದ ಸಹಾಯಧನ ಸಿಗಲಿದೆ. ಸರ್ಕಾರ ನಿಗದಿಪಡಿಸಿರುವ ಪ್ರತಿ ಹಂತದಲ್ಲಿ ಮನೆ ನಿರ್ಮಾಣದ ಫೋಟೊ ತೆಗೆಸಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿಸಿದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಅಧಿಕಾರಿಗಳು ಈ ವೇಳೆ ಲಂಚಕ್ಕೆ ಬೇಡಿಕೆ ಇಟ್ಟರೆ ನನಗೆ ಕರೆ ಮಾಡಿ’ ಎಂದು ತಿಳಿಸಿದರು.
‘ಸರ್ಕಾರ ನೀಡುವ ಹಣದ ಜತೆಗೆ ನಿಮ್ಮ ಹಣವನ್ನೂ ಸೇರಿಸಿ ಗುಣಮಟ್ಟದ ಚಿಕ್ಕ, ಚೊಕ್ಕ ಸುಭದ್ರವಾದ ಮನೆಯನ್ನು ನಿರ್ಮಿಸಿಕೊಂಡು ನೆಮ್ಮದಿಯಾಗಿರಿ’ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಸುಮಾರು 135 ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.