ADVERTISEMENT

HPV ಲಸಿಕೆ ಪಡೆಯಿರಿ: ಕ್ಯಾನ್ಸರ್‌ನಿಂದ ದೂರವಿರಿ; ವೈದ್ಯಕೀಯ ಕ್ಷೇತ್ರದ ತಜ್ಞರು

ಕ್ಯಾನ್ಸರ್ ತಡೆ: ರಾಷ್ಟ್ರವ್ಯಾಪಿ ಅರಿವಿನ ಅಭಿಯಾನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:06 IST
Last Updated 24 ಜೂನ್ 2025, 16:06 IST
ಸಮಾವೇಶದಲ್ಲಿ ಡಾ. ಭಾಸ್ಕರ್ ಶಣೈ ಮಾತನಾಡಿದರು. ಡಾ. ಶೋಭಾ, ಡಾ. ಚಿದಾನಂದ್, ಡಾ.ರಜನಿ ಉದಯ್, ಡಾ. ಪ್ರಶಾಂತ್ ಎಂ.ವಿ ಉಪಸ್ಥಿತರಿದ್ದರು 
ಸಮಾವೇಶದಲ್ಲಿ ಡಾ. ಭಾಸ್ಕರ್ ಶಣೈ ಮಾತನಾಡಿದರು. ಡಾ. ಶೋಭಾ, ಡಾ. ಚಿದಾನಂದ್, ಡಾ.ರಜನಿ ಉದಯ್, ಡಾ. ಪ್ರಶಾಂತ್ ಎಂ.ವಿ ಉಪಸ್ಥಿತರಿದ್ದರು    

ಬೆಂಗಳೂರು: ‘ಎಚ್‌ಪಿವಿ ಲಸಿಕೆ ಪಡೆಯುವ ಮೂಲಕ ‘ಎಚ್‌ಪಿವಿ’ (ಹ್ಯೂಮನ್ ಪ್ಯಾಪಿಲ್ಲೋಮಾ ವೈರಸ್‌)ನಿಂದ ಹರಡುವ ಗರ್ಭ ಕಂಠದ ಕ್ಯಾನ್ಸರ್ ಮತ್ತು ಇತರ ಕೆಲವು ಕ್ಯಾನ್ಸರ್‌ಗಳಿಂದ ರಕ್ಷಿಸಿಕೊಳ್ಳಬಹುದು. ಈ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ’ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟರು.

ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಾನ್‌ಕ್ವೇರ್‌; ಎಚ್‌ಪಿವಿ ಆ್ಯಂಡ್ ಕ್ಯಾನ್ಸರ್‌ ಕಾನ್‌ಕ್ಲೇವ್‌ 2025’ ಸಮಾವೇಶದಲ್ಲಿ ವಿವಿಧ ಸಂಸ್ಥೆಗಳ ತಜ್ಞರು, ಲಸಿಕೆ ಪಡೆಯುವುದರಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಎಚ್‌ಪಿವಿಯಿಂದ ಗರ್ಭಕೊರಳಿನ ಕ್ಯಾನ್ಸರ್‌ ಅಲ್ಲದೇ, ಯೋನಿ, ಗುದ, ಶಿಶ್ನ ಮತ್ತು ಗಂಟಲ ನಾಳದ ಕ್ಯಾನ್ಸರ್‌ಗೂ ಕಾರಣವಾಗುತ್ತದೆ. ಇದು ಲಿಂಗಭೇದವಿಲ್ಲದೇ ಬಾಧಿಸುತ್ತದೆ. ಪ್ರಾರಂಭಿಕ ಅರಿವು, ನಿರಂತರ ತಪಾಸಣೆ ಮತ್ತು ಲಸಿಕೆ ತೆಗದುಕೊಳ್ಳುವಂತಹ ಮುಂಜಾಗ್ರತಾ ಕ್ರಮಗಳಿಂದ, ಪ್ರತಿ ವ್ಯಕ್ತಿಯನ್ನು ಕ್ಯಾನ್ಸರ್‌ನಿಂದ ರಕ್ಷಿಸಬಹುದು. ಈ ಎಲ್ಲ ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಡಾ. ಭಾಸ್ಕರ್‌ ಶೆಣೈ ತಿಳಿಸಿದರು.

ADVERTISEMENT

‘9ರಿಂದ 14 ವರ್ಷದ ಬಾಲಕರು ಮತ್ತು ಬಾಲಕಿಯರು ಇಬ್ಬರೂ ಲಸಿಕೆ ತೆಗೆದುಕೊಂಡಾಗ, ರೋಗ ನಿಯಂತ್ರಣ ಪರಿಪೂರ್ಣವಾಗುತ್ತದೆ. ಈ ವಯಸ್ಸಿನಲ್ಲಿ ಲಸಿಕೆ ಪಡೆಯುವುದರಿಂದ ಪರಿಣಾಮ ಅಧಿಕ. ಲಸಿಕೆ ತೆಗೆದುಕೊಂಡರೂ ತಪಾಸಣೆ ಮಾಡಿಸುವುದನ್ನು ನಿಲ್ಲಿಸಬಾರದು. ಲಸಿಕೆ ತೆಗೆದುಕೊಳ್ಳುವಷ್ಟೇ ತಪಾಸಣೆಯೂ ಮುಖ್ಯ’ ಎಂದು ಕಿದ್ವಾಯಿ ಆಸ್ಪತ್ರೆಯ ಡಾ. ಶೋಭಾ ಅಭಿಪ್ರಾಯಪಟ್ಟರು.

‘ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಆದರೆ, ಗರ್ಭಿಣಿಯರಿದ್ದಾಗ ಲಸಿಕೆ ಪಡೆಯಬೇಕೇ ಬೇಡವೇ ಎಂಬುದರ ಬಗ್ಗೆ ಇನ್ನೂ ಅಧ್ಯಯನವಾಗಿಲ್ಲ’ ಎಂದು ಸಪ್ತಗಿರಿ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದ ಡಾ. ರಜನಿ ಉದಯ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದೇಶದಲ್ಲಿ ನಿತ್ಯ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ಕ್ಯಾನ್ಸರ್‌ನಿಂದ ವಾರ್ಷಿಕವಾಗಿ 77 ಸಾವಿರಕ್ಕೂ ಹೆಚ್ಚಿನ ಮಂದಿ ಮೃತಪಡುತ್ತಿದ್ದಾರೆ. ಸೀರಂ ಇನ್‌ಸ್ಟಿಟ್ಯೂಟ್‌ ಕೈಗೆಟಕುವ ಬೆಲೆಯಲ್ಲಿ ಎಚ್‌ಪಿವಿ ಲಸಿಕೆ ಅಭಿವೃದ್ಧಿಪಡಿಸಿದೆ. ಲಸಿಕೆ ಪಡೆಯುವ ಕುರಿತು ದೇಶದಾದ್ಯಂತ ಅಭಿಯಾನ ಕೈಗೊಳ್ಳುವ ಅಗತ್ಯವಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.