ಬೆಂಗಳೂರು: ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ ಜಿಲ್ಲೆಗಳಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ವಿತರಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ಲಸಿಕೆ ವಿತರಣೆ ಬಗ್ಗೆ ರಾಜ್ಯ ಸರ್ಕಾರವು 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಗರ್ಭಕಂಠ ಕ್ಯಾನ್ಸರ್ ತಡೆಗೆ 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಎರಡು ಡೋಸ್ ಎಚ್‌ಪಿವಿ ಲಸಿಕೆ ಒದಗಿಸುವ ಬಗ್ಗೆ ಈ ಹಿಂದೆ ತಜ್ಞರ ಸಮಿತಿಯೂ ಶಿಫಾರಸು ಮಾಡಿತ್ತು. ಅದರಂತೆ ನಾಲ್ಕು ಗಣಿಬಾಧಿತ ಜಿಲ್ಲೆಗಳ 8 ತಾಲ್ಲೂಕುಗಳಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ವಿತರಣೆ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ತುಮಕೂರಿನ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಬಳ್ಳಾರಿಯ ಸಂಡೂರು, ಚಿತ್ರದುರ್ಗದ ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ಹಾಗೂ ವಿಜಯನಗರದ ಹೊಸಪೇಟೆಯಲ್ಲಿ ಈ ಲಸಿಕೆ ವಿತರಣೆಗೆ ಒಟ್ಟು ₹ 4.74 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಪ್ರತಿ ಡೋಸ್‌ಗೆ ₹ 1,260 ನಿಗದಿಪಡಿಸಲಾಗಿದೆ. ಒಟ್ಟು 37,470 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ ಎರಡು ಡೋಸ್‌ಗಳನ್ನು ವಿತರಿಸುವಂತೆ ಸೂಚಿಸಲಾಗಿದೆ.
ಈ ಲಸಿಕೆ ಪಡೆಯಲು ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿ ಹೊಂದಿರಬೇಕು. 14 ವರ್ಷದ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕುವುದರಿಂದ ಅವರು ಅರ್ಹ ವಯಸ್ಸನ್ನು ತಲುಪುವ ಮೊದಲು ಎಚ್‌ಪಿವಿ ಸೋಂಕಿನಿಂದ ರಕ್ಷಣೆ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.