ಮಕ್ಕಳನ್ನು ಸೆಳೆಯುವ ನೈಫ್ ಪಟಾಕಿ
ಪ್ರಜಾವಾಣಿ ಚಿತ್ರ
ಬೆಂಗಳೂರು: ದೀಪಾವಳಿಯ ಸಂಭ್ರಮಕ್ಕೆ ಕಳೆಗಟ್ಟುವ ಪಟಾಕಿಗಳು ಹೊಸೂರು ಮಾರುಕಟ್ಟೆಗೆ ಬಂದಿವೆ. ಮಕ್ಕಳನ್ನು ಸೆಳೆಯಲು ಫ್ಯಾನ್ಸಿ ಪಟಾಕಿಗಳೇ ಈ ಬಾರಿ ಹೆಚ್ಚಿವೆ. ಪಿಜ್ಜಾ, ಫಿಶ್, ಗಿಟಾರ್, ಗೋಲ್ಡನ್ ಡಕ್, ಜಂಗಲ್ ಫ್ಯಾಂಟಸಿ ಪಟಾಕಿಗಳು ಮಕ್ಕಳನ್ನು ಪ್ರಭಾವಿಸುತ್ತಿವೆ.
ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ಇರುವ ಹೊಸೂರು ರಸ್ತೆಯಲ್ಲಿ ಅತ್ತಿಬೆಲೆ, ಸೂರ್ಯನಗರದಿಂದ ಹಿಡಿದು ಹೊಸೂರುವರೆಗೆ ರಸ್ತೆ ಬದಿಯಲ್ಲಿ ನೂರಾರು ಪಟಾಕಿ ಮಳಿಗೆಗಳು ತಲೆ ಎತ್ತಿವೆ.
ರಾಜ ಮಹರಾಜರ ಖಡ್ಗದಂತಿರುವ ನೈಫ್ ಪಟಾಕಿಯ ಗತ್ತು ಗೈರತ್ತೇ ಬೇರೆಯಾಗಿದ್ದರೂ ಯಾವುದೇ ಅಪಾಯವಿಲ್ಲದೇ ಪುಟ್ಟ ಮಕ್ಕಳೂ ಇದನ್ನು ಹೊತ್ತಿಸಬಹುದು. ಬಣ್ಣ ಬಣ್ಣದ ಬೆಳಕನ್ನು ಇದು ಚಿಮ್ಮಿಸುತ್ತದೆ. ನೈಫ್ ಬಿಟ್ಟರೆ ಪಿಜ್ಜಾ ಪಟಾಕಿಯನ್ನೇ ಮಕ್ಕಳು ಹೆಚ್ಚು ಖರೀದಿಸುತ್ತಿದ್ದಾರೆ ಎಂದು ‘ಗಣಪತ್’ ಪಟಾಕಿ ಮಳಿಗೆಯ ಆದಿತ್ಯ ನವನೀತ್ ವಿವರ ನೀಡಿದರು.
ಪ್ರಾಣಿಗಳನ್ನು ನೆನಪಿಸುವ ಜಂಗಲ್ ಫ್ಯಾಂಟಸಿ ಪಟಾಕಿ, ವರ್ಣಮಯ ಒಲಿಂಪಿಕ್ ಟಾರ್ಚ್, ವಿಶಲ್ ಶಬ್ದ ಮಾಡುವ ಭೂಚಕ್ರ, ಕಲ್ಲಂಗಡಿ ಪಟಾಕಿ, ಫಂಕಿ ಫಿಶ್‌ಗಳು ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂದು ‘ತಾಮರಿ’ ಟ್ರೇಡರ್ಸ್‌ನ ರಾಹುಲ್ ಮಾಹಿತಿ ನೀಡಿದರು.
ಪಿಸ್ತೂಲ್: ವಿಶಿಷ್ಟ, ವಿಭಿನ್ನ ಪಿಸ್ತೂಲ್, ಗನ್‌ಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ. ಕಡಿಮೆ ಬೆಳೆಯ ಪ್ಲಾಸ್ಟಿಕ್ ಪಿಸ್ತೂಲ್‌ಗಳಿಂದ ಹಿಡಿದು ಅಧಿಕ ಬೆಲೆಯ ಕಬ್ಬಿಣದ ಪಿಸ್ತೂಲ್‌ಗಳವರೆಗೆ ತರೆಹವಾರಿ ಇವೆ.
‘ನೈಜ ಪಿಸ್ತೂಲಿನಂತೆ ಇರುವುದಕ್ಕೆ ₹600 ದರ ಇದೆ. ಇದೇ ಹೆಚ್ಚು ಬೆಲೆಯದ್ದು. ಉಳಿದಂತೆ ₹50, ₹100, ₹200ಕ್ಕೆ ಸಿಗುತ್ತವೆ’ ಎಂದು ಮಾರಾಟಗಾರ ಅನ್ಬು ತಿಳಿಸಿದರು.
ಕನ್ನಡಿಗರೇ ಗ್ರಾಹಕರು: ಗಡಿಯಲ್ಲಿ ಕರ್ನಾಟಕದ ಭಾಗಕ್ಕಿಂತ ತಮಿಳುನಾಡಿನ ಭಾಗದಲ್ಲಿಯೇ ಪಟಾಕಿ ಅಂಗಡಿಗಳು ಹೆಚ್ಚಿದ್ದರೂ ಶೇ 90ಕ್ಕೂ ಅಧಿಕ ಗ್ರಾಹಕರು ಕನ್ನಡಿಗರೇ ಆಗಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಜನರು ಬಂದು ಪಟಾಕಿ ಖರೀದಿಸುತ್ತಾರೆ ಎಂದು ಕಲಾಮಂಗಲ್ ಪಟಾಕಿ ಮಳಿಗೆಯ ಭಾಸ್ಕರ್ ಮಾಹಿತಿ ನೀಡಿದರು.
ಶೇ 70ರಿಂದ ಶೇ 90ರವರೆಗೆ ರಿಯಾಯಿತಿ
ಪಟಾಕಿ ತಯಾರಿಕೆಯಲ್ಲಿ ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿರುವ ಶಿವಕಾಶಿಯಿಂದ ಇಲ್ಲಿಗೆ ನೇರವಾಗಿ ಪಟಾಕಿಗಳನ್ನು ತಂದು ಮಾರಾಟ ಮಾಡುತ್ತಿರುವುದರಿಂದ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ದೊರೆಯುತ್ತಿವೆ. ಸ್ಟ್ಯಾಂಡರ್ಡ್‌ನಂಥ ಕಂಪನಿಗಳ ಪಟಾಕಿಗಳಿಗೆ ಶೇ 70ರಷ್ಟು ರಿಯಾಯಿತಿ ಎಲಿಫೆಂಟ್ ಸುಪ್ರೀಂ ಸೋನಿ ಅಜಂತ ಆನಂದ ಶ್ರೀವಿಜಯ ಜೈರೋಬಿ ತನಿಗೈ ಮುಂತಾದ ಸ್ಥಳೀಯ ಕಂಪನಿಗಳ ಪಟಾಕಿಗಳಿಗೆ ಶೇ 90ರಷ್ಟು ರಿಯಾಯಿತಿ ದೊರೆಯುತ್ತಿದೆ.
ಗ್ರಾಹಕರು ಏನನ್ನುತ್ತಾರೆ?
ಪ್ರತಿವರ್ಷ ಅಪ್ಪ ಬಂದು ಪಟಾಕಿ ಖರೀದಿಸುತ್ತಿದ್ದರು. ಈ ಬಾರಿ ನಾನೇ ಬಂದಿದ್ದೇನೆ. ಬೆಂಗಳೂರಿನಲ್ಲಿ ಸ್ಟ್ರಾಂಡರ್ಡ್ ಕಂಪನಿಯ ಪಟಾಕಿಗಳಿಗೆ ಶೇ 35ರಿಂದ ಶೇ 40 ರಿಯಾಯಿತಿ ಲೋಕಲ್ ಕಂಪನಿಗಳಿಗೆ ಶೇ 45ರಷ್ಟು ರಿಯಾಯಿತಿ ದೊರೆತರೆ ಇಲ್ಲಿ ಅದರ ಡಬಲ್ ರಿಯಾಯಿತಿ ಸಿಗುತ್ತದೆಆದಿತ್ಯ, ಕೆಂಗೇರಿ
ಮಂಗಳೂರಿನಲ್ಲಿ ಪಟಾಕಿ ದರ ದುಬಾರಿ ಆಗಿರುವುದರಿಂದ ನಾವು ಮೂರ್ನಾಲ್ಕು ಸ್ನೇಹಿತರು ಸೇರಿ ಹೊಸೂರಿಗೆ ಬಂದು ಪ್ರತಿವರ್ಷ ಮನೆಗೆ ಪಟಾಕಿ ಖರೀದಿಸಿ ಒಯ್ಯುತ್ತಿದ್ದೆವು. ಈ ಬಾರಿ ಉಪ್ಪಿನಂಗಡಿಯಲ್ಲಿ ಪಟಾಕಿ ಅಂಗಡಿಯನ್ನೇ ಹಾಕುತ್ತಿದ್ದೇವೆ.ಸಚಿನ್, ಉಪ್ಪಿನಂಗಡಿ
ನಾವು ಫ್ಯಾಮಿಲಿ ಜೊತೆಗೆ ಬಂದಿದ್ದೇವೆ. ಮಕ್ಕಳಿಗೆ ಪಟಾಕಿ ಅಂದರೆ ಇಷ್ಟ. ಮಕ್ಕಳ ಇಷ್ಟವನ್ನೂ ನೋಡಿಕೊಂಡು ಪರಿಸರಕ್ಕೂ ಹಾನಿಯಾಗದಂತೆ ಇರುವ ಪಟಾಕಿಗಳನ್ನು ಖರೀದಿ ಮಾಡಿದ್ದೇವೆ.ಗೀತಾ ಸಂತೋಷ್‌ಕುಮಾರ್, ರಾಜರಾಜೇಶ್ವರಿ ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.