ADVERTISEMENT

ಯಾರದೋ ತಪ್ಪಿಗೆ, ಯಾರಿಗೋ ಶಿಕ್ಷೆ !

ಕೆರೆಯ ನೀರು ನುಗ್ಗಿ ಹಾಳಾದ ಹೊಲಿಗೆ ಯಂತ್ರಗಳು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 1:57 IST
Last Updated 26 ನವೆಂಬರ್ 2019, 1:57 IST
ಕೆರೆಯ ನೀರಿನಿಂದ ಹಾನಿಗೊಳಗಾದ ಹೊಲಿಗೆ ಯಂತ್ರಗಳನ್ನು ಹೊರಗೆ ಇಡುತ್ತಿರುವ ಲಾವಣ್ಯ ವಿಜಯ್‌ಕುಮಾರ್ -- – ಪ್ರಜಾವಾಣಿ ಚಿತ್ರ
ಕೆರೆಯ ನೀರಿನಿಂದ ಹಾನಿಗೊಳಗಾದ ಹೊಲಿಗೆ ಯಂತ್ರಗಳನ್ನು ಹೊರಗೆ ಇಡುತ್ತಿರುವ ಲಾವಣ್ಯ ವಿಜಯ್‌ಕುಮಾರ್ -- – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೆಸರು ತುಂಬಿದ, ಸಂಪೂರ್ಣ ಹಾಳಾಗಿದ್ದ ಸ್ವಯಂಚಾಲಿತ ಹೊಲಿಗೆ ಯಂತ್ರಗಳನ್ನು ಕಣ್ಣಂಚಲ್ಲಿ ನೀರು ತುಂಬಿಕೊಂಡೇ ನೋಡುತ್ತಾ ನಿಂತಿದ್ದರು ಲಾವಣ್ಯ ವಿಜಯ್‌ಕುಮಾರ್.

ಸ್ವಾವಲಂಬಿಯಾಗಬೇಕು, ಬದುಕನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕು ಎಂಬ ಹಂಬಲದಲ್ಲಿ ಒಂದೂವರೆ ವರ್ಷದ ಹಿಂದಷ್ಟೇ ₹5 ಲಕ್ಷ ಸಾಲ ಮಾಡಿ ಅವರು ತಂದಿದ್ದ ಯಂತ್ರಗಳು ನೀರು ಪಾಲಾಗಿದ್ದನ್ನು ಕಂಡು ಕಂಗಾಲಾಗಿದ್ದರು.

‘ಒಂದು ಹೊಲಿಗೆ ಯಂತ್ರಕ್ಕೆ ₹25 ಸಾವಿರ ಆಗುತ್ತದೆ. ಐದು ಯಂತ್ರಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಬಜಾಜ್‌ ಫೈನಾನ್ಸ್‌ನಿಂದ ₹5 ಲಕ್ಷ ಸಾಲ ತೆಗೆದುಕೊಂಡು ಬುಟಿಕ್‌ ಆರಂಭಿಸಿದ್ದೆ. ಮುಂದೇನು ಮಾಡಬೇಕೋ ತಿಳಿಯುತ್ತಿಲ್ಲ’ ಎಂದು ಅಳಲು ತೋಡಿಕೊಂಡರು ಐಕ್ಲೈಂಬ್‌ ಬುಟಿಕ್‌ನ ಲಾವಣ್ಯ.

ADVERTISEMENT

‘ಮಹಿಳೆಯರ ಡ್ರೆಸ್‌, ಬ್ಲೌಸ್‌, ನೃತ್ಯದ ಉಡುಪುಗಳನ್ನು ಹೊಲಿದು ಕೊಡುತ್ತಿದ್ದೆವು. ಈಗ ₹2 ಲಕ್ಷ ಮೌಲ್ಯದ ಬಟ್ಟೆಗಳು ಹಾಳಾಗಿವೆ. ಗ್ರಾಹಕರಿಗೆ ಅಷ್ಟೇ ಮೊತ್ತದ ಹಣವನ್ನು ನಾನೀಗ ಹಿಂದಿರುಗಿಸಬೇಕಿದೆ’ ಎಂದರು.

‘ತಿಂಗಳಿಗೆ ₹23 ಸಾವಿರ ಸಾಲದ ಕಂತು ಕಟ್ಟಬೇಕು. ಇಬ್ಬರು ಕೆಲಸಕ್ಕೆ ಇದ್ದಾರೆ. ಅವರಿಗೆ ಸಂಬಳ ಕೊಡಬೇಕು. ದಿಕ್ಕೇ ತೋಚದಂತಾಗಿದೆ’ ಎಂದರು.

ಮಾಹಿತಿಯೇ ಇರಲಿಲ್ಲ:‘ಭಾನುವಾರ ನಮ್ಮ ಅಂಗಡಿಯ ಎದುರೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯು
ತ್ತಿತ್ತು. ನಟ ಮುರಳಿ ಬಂದಿದ್ದರು. ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಧ್ಯಾಹ್ನ 1ರ ವೇಳೆಗೆ ರಸ್ತೆಯಲ್ಲಿ ನೀರು ಹರಿಯತೊಡಗಿತು. ಒಳಚರಂಡಿ ನೀರು ಇರಬಹುದು ಎಂದುಕೊಂಡು ಸುಮ್ಮನಾದೆ. ನೆಲದ ಮೇಲಿದ್ದ ಕೆಲವು ವಸ್ತುಗಳನ್ನು ಯಂತ್ರಗಳ ಮೇಲೆ ಇಟ್ಟೆ. ಆದರೆ, ಅದಾಗಿ 10 ನಿಮಿಷಗಳಲ್ಲೇ ಸಾಕಷ್ಟು ನೀರು ದಿಢೀರನೇ ಅಂಗಡಿಯೊಳಗೆ ನುಗ್ಗಿತು’ ಎಂದು ಲಾವಣ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.