ADVERTISEMENT

ಬಂದ್‌ನಲ್ಲಿ ಕಂಡ ಮಾನವೀಯ ಮುಖ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 19:38 IST
Last Updated 10 ಸೆಪ್ಟೆಂಬರ್ 2018, 19:38 IST
   

ಬೆಂಗಳೂರು: ಬಂದ್‌ ಸಂದರ್ಭ ನಗರದ ಹಲವು ಸ್ವಯಂ ಸೇವಕರು ತೊಂದರೆಗೊಳಗಾದವರಿಗೆ ಸಹಾಯಹಸ್ತ ಚಾಚಿದರು. ಈ ಮೂಲಕ ಮಹಾನಗರದ ಮಾನವೀಯ ಮುಖಗಳು ಅನಾವರಣಗೊಂಡವು.

ದೂರದ ಊರಿನಿಂದ ಬಂದು ಮುಂದೆ ಸಾಗಲಾರದೇ ಬಸ್‌, ರೈಲು ನಿಲ್ದಾಣಗಳಲ್ಲಿ ಸಿಲುಕಿದವರಿಗೆ ನಗರದ ಕೆಲವರು ತಮ್ಮ ಕಾರುಗಳನ್ನು ತಂದು ನಿಗದಿತ ಸ್ಥಳಗಳಿಗೆ ಕರೆದೊಯ್ದರು.

ಅನಿಲ್‌ ಕುಮಾರ್‌ (ಚಾಲಕ) ಮತ್ತು ಪ್ರಭಾವತಿ ಎಂಬುವವರು ತುರ್ತಾಗಿ ಆಸ್ಪತ್ರೆಗೆ ಹೋಗುವವರಿಗೆ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ತಮ್ಮ ಕಾರಿನ ಮೂಲಕ ನೆರವಾದರು. ಆಸ್ಪತ್ರೆಗೆ ಹೋಗುವವರಿಗೆ ಈ ಇಬ್ಬರು 10 ಟ್ರಿಪ್‌ಗಳಷ್ಟು ಕಾರು ಸಂಚಾರ ನಡೆಸಿದರು.

ADVERTISEMENT

ಪ್ರಭಾವತಿ ಅವರು ಬಸ್‌, ರೈಲು ನಿಲ್ದಾಣಗಳಲ್ಲಿ ಆಸ್ಪತ್ರೆಗೆ ಹೋಗುವ ಅಗತ್ಯವುಳ್ಳವರು, ಹಿರಿಯ ನಾಗರಿಕರನ್ನು ಗುರುತಿಸುತ್ತಿದ್ದರು. ಅಂಥವರನ್ನು ಅನಿಲ್‌ ನಿಗದಿತ ಸ್ಥಳಕ್ಕೆ ಬಿಡುತ್ತಿದ್ದರು.

‘ಗರ್ಭಿಣಿಯರು, ಹಿರಿಯ ನಾಗರಿಕರಿಗೆ ನಾವು ನೆರವಾಗಿದ್ದೇವೆ. ಹಿಂದೂಪುರದಿಂದ ಬಂದಿದ್ದ ಹಿರಿಯ ನಾಗರಿಕರೊಬ್ಬರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿದ್ದೇವೆ. ಎರಡು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಅಗತ್ಯವುಳ್ಳವರಿಗೆ ನೆರವಾಗುವುದರಲ್ಲಿ ಸಂತೋಷವಿದೆ’ ಎಂದು ಅನಿಲ್‌ ಹೇಳಿದರು.

ಕ್ಯಾಬ್‌ ಚಾಲಕ ಓಂಕಾರಮೂರ್ತಿ ತಮ್ಮ ಎಸ್‌ಯುವಿ ಕಾರಿನಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರನ್ನು ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ ಪ್ರದೇಶಗಳಿಗೆ ಉಚಿತವಾಗಿ ತಲುಪಿಸಿದರು. ‘ನಾನು ಈ ಕೆಲಸವನ್ನು 5 ವರ್ಷಗಳಿಂದ ಆಟೊರಿಕ್ಷಾ ಓಡಿಸುತ್ತಿದ್ದಾಗಿನಿಂದಲೂ ಮಾಡುತ್ತಿದ್ದೇನೆ. ಈಗ ಕಾರಿನಲ್ಲಿಯೂ ಅದೇ ಕೆಲಸ ಮುಂದುವರಿಸಿದ್ದೇನೆ’ ಎಂದು ಓಂಕಾರ್‌ ಹೇಳಿದರು.

ಬಂದ್‌ ಪ್ರತಿರೋಧಿಸಲು ಬಂದ ಗಾಂಧಿ: ಮೆಜೆಸ್ಟಿಕ್‌ನಲ್ಲಿ ಬಂದ್‌ ವೇಳೆ ‘ಗಾಂಧಿ’ ಕಂಡರು. ಗೋವಾದಿಂದ ಬಂದ ಆಗಸ್ಟಿನ್‌ ಡಿ’ ಅಲ್ಮಡ ಎಂಬ 65ರ ಹರೆಯದ ಹಿರಿಯ ನಾಗರಿಕರು ಬಂದ್‌ಗೆ ವಿರೋಧ ವ್ಯಕ್ತಪಡಿಸಿ ಸಂದೇಶ ಸಾರಲು ಗಾಂಧಿ ವೇಷ ಧರಿಸಿ ಬಂದಿದ್ದರು. ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗುವುದೂ ಅವರ ಉದ್ದೇಶವಾಗಿತ್ತು. ಜನರು ಗಾಂಧಿ ವೇಷಧಾರಿ ಬಳಿ ನಿಂತು ಸೆಲ್ಫಿ ತೆಗೆಸಿಕೊಂಡರು.

ಉಚಿತ ಆಹಾರ ವಿತರಣೆ

ಮೂವರು ಗೆಳೆಯರ ಗುಂಪೊಂದು, ಮೆಜೆಸ್ಟಿಕ್‌ನಲ್ಲಿ ಸಿಲುಕಿದ ಪ್ರಯಾಣಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿತು. ಕುಮಾರಸ್ವಾಮಿ ಲೇಔಟ್‌ ನಿವಾಸಿಗಳಾದ ಶ್ರೀನಾಥ್‌ ಗುಪ್ತಾ, ಅಶೋಕ್‌ ಮತ್ತು ನಾಗ ಮಹೇಶ್‌ ಅವರು ಚಿತ್ರಾನ್ನದ 400 ಪ್ಯಾಕೆಟ್‌ಗಳನ್ನು ವಿತರಿಸಿದರು. ‘ನಾವು ಮೂರನೇ ಬಾರಿಗೆ ಈ ಕೆಲಸ ಮಾಡುತ್ತಿದ್ದೇವೆ. 25 ಕೆ.ಜಿ ಅಕ್ಕಿಯ ಚಿತ್ರಾನ್ನ ಸಿದ್ಧಪಡಿಸಿದ್ದೆವು’ ಎಂದು ಶ್ರೀನಾಥ್‌ ಹೇಳಿದರು.

ಬಸವೇಶ್ವರ ನಗರದ ಆಕ್ಸ್‌ಫರ್ಡ್ ಸ್ಕೂಲ್‌ ವಿದ್ಯಾರ್ಥಿಗಳಾದ ನಂದಿತಾ ಮತ್ತು ಜಿಸ್ವಂತ್‌ ಅವರು ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಿಸ್ಕತ್‌ ವಿತರಿಸಿದರು. ನಂದಿತಾ 11ನೇ ತರಗತಿ ವಿದ್ಯಾರ್ಥಿನಿ. ಎರಡು ಬಾರಿ ರಾಷ್ಟ್ರ ಮಟ್ಟದ ಹಾಕಿ ಸ್ಕೇಟಿಂಗ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದವರು.

‘ಈ ಕೆಲಸವನ್ನು ಎರಡು ವರ್ಷದಿಂದ ನನ್ನ ತಂದೆ ಪ್ರಕಾಶ್‌ ಜತೆ ಮಾಡುತ್ತಿದ್ದೇನೆ. ಈ ಹಿಂದೆ ಬಿಸ್ಕತ್‌ ಮತ್ತು ಜ್ಯೂಸ್‌ ವಿತರಿಸಿದ್ದೆವು’ ಎಂದು ನಂದಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.