ADVERTISEMENT

ಅವಮಾನ: ಶಾಲೆಗೆ ನೋಟಿಸ್

ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದ ಸಚಿವ ಸುರೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 19:22 IST
Last Updated 11 ಫೆಬ್ರುವರಿ 2021, 19:22 IST
ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್, ವಿದ್ಯಾರ್ಥಿ ಮತ್ತು ಪೋಷಕರಿಗೆ ಧೈರ್ಯ ಹೇಳಿದರು
ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್, ವಿದ್ಯಾರ್ಥಿ ಮತ್ತು ಪೋಷಕರಿಗೆ ಧೈರ್ಯ ಹೇಳಿದರು   

ಬೆಂಗಳೂರು: ಶುಲ್ಕ ಪಾವತಿಸಲು ಸಾಧ್ಯ ವಾಗದ ವಿದ್ಯಾರ್ಥಿಗೆ ಅವಮಾನಿಸಿ, ಪರೀಕ್ಷೆಗೆ ಅವಕಾಶ ನಿರಾಕರಿಸಿದ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಎಚ್.ಎಸ್.ಆರ್. ಬಡಾವಣೆಯ ಸೋಮಸುಂದರ ಪಾಳ್ಯದ ರವೀಂದ್ರ ಭಾರತಿ ಗ್ಲೋಬಲ್ ಶಾಲೆಯವರು ಮಾಡಿದ ಅವಮಾನದಿಂದ ನೊಂದಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದಕ್ಕೆ ಶಾಲೆಯೇ ನೇರ ಹೊಣೆಯಾಗಿದೆ. ಶಾಲೆಯ ಅಮಾನವೀಯ ಮತ್ತು ಕ್ರೂರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ-188ನೇ ಪ್ರಕರಣಗಳಡಿ ಕ್ರಿಮಿನಲ್ ಮೊಕದ್ದಮೆ ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆ-1995ರಡಿ ಶಾಲೆಯ ಮಾನ್ಯತೆ ಹಾಗೂ ಕೇಂದ್ರ ಪಠ್ಯಕ್ರಮ ಸಂಯೋಜನೆಗೆ ರಾಜ್ಯ ಸರ್ಕಾರದ ನಿರಪೇಕ್ಷಣಾ ಪತ್ರವನ್ನು ಹಿಂಪಡೆಯಲು ಏಕೆ ಶಿಫಾರಸು ಮಾಡಬಾರದು ಎಂಬುದಕ್ಕೆ ಕಾರಣ ಕೇಳಿ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಯ ಮನೆಗೆ ಗುರುವಾರ ಭೇಟಿ ನೀಡಿದ ಅವರು, ವಿದ್ಯಾರ್ಥಿ ಮತ್ತು ಪೋಷಕರಿಗೆ ಧೈರ್ಯ ಹೇಳಿದರು.

ADVERTISEMENT

‘ನೀನು ಆತ್ಮಹತ್ಯೆ ಮಾಡಿಕೊಂಡಿದ್ದರೆ ನಿನ್ನ ತಂದೆ-ತಾಯಿ, ತಂಗಿಗೆ ಯಾರು ಗತಿ ಎಂಬುದನ್ನು ಯೋಚಿಸಬೇಕು. ಯಾವತ್ತೂ ಆತ್ಮಹತ್ಯೆಗೆ ಪ್ರಯತ್ನಿಸಬಾರದು’ ಎಂದು ಬುದ್ಧಿ ಹೇಳಿದರು.

‘ವಲಸೆ ಕಾರ್ಮಿಕರೊಬ್ಬರ ಪುತ್ರ ಮಹೇಶ ಎಂಬಾತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದಾಗ ಅವನ ಶಿಕ್ಷಣದ ಮುಂದುವರಿಕೆಗೆ ನೆರವು ನೀಡಲು ಹಲವರು ಮುಂದೆ ಬಂದರು. ಅಪಮಾನ-ನಿಂದನೆ ಮೀರಿ ನಿಲ್ಲಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.