ಬೆಂಗಳೂರು: ದಿಂಬು ಹಾಗೂ ಬೆಡ್‌ಶೀಟ್‌ನಿಂದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡರಹಳ್ಳಿಯ ಕಾಳಿಕಾನಗರದಲ್ಲಿ ಬುಧವಾರ ನಡೆದಿದೆ.
ಜಿ.ಮಮತಾ (32) ಕೊಲೆಯಾದವರು. ಅವರ ಪತಿ ಸುರೇಶ್(40) ಎಂಬಾತ ಕೃತ್ಯ ಎಸಗಿದ ಬಳಿಕ ಅದೇ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಂಪತಿಗೆ ಆರು ವರ್ಷ ಹಾಗೂ 13 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆರು ವರ್ಷದ ಮಗು ಮನೆಯಲ್ಲಿದ್ದ ವೇಳೆಯೇ ಕೃತ್ಯ ಎಸಗಲಾಗಿದೆ. ಜಿ.ಮಮತಾ ಅವರ ತಾಯಿ ರುಕ್ಮಿಣಿ ಅವರು ದೂರು ನೀಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಸುರೇಶ್ 14 ವರ್ಷಗಳ ಹಿಂದೆ ಮಮತಾ ಅವರನ್ನು ಮದುವೆಯಾಗಿದ್ದ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕೆಲವು ವರ್ಷ ನೆಲಸಿದ್ದ ದಂಪತಿ, ನಂತರ ಬೆಂಗಳೂರಿಗೆ ಬಂದಿದ್ದರು. ನಗರದ ತಿಗಳರಪಾಳ್ಯದ ಬಾಡಿಗೆಯ ಮನೆಯಲ್ಲಿ ನೆಲಸಿದ್ದರು. ಆರಂಭದಲ್ಲಿ ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುರೇಶ್, ಎರಡು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
‘ಕೆಲಸಕ್ಕೆ ಹೋಗದೇ ಪತ್ನಿಯ ಜತೆಗೆ ನಿತ್ಯ ಸುರೇಶ್ ಗಲಾಟೆ ಮಾಡುತ್ತಿದ್ದ. ಹಲವು ಬಾರಿ ಬುದ್ಧಿ ಹೇಳಿದ್ದರೂ ಬದಲಾವಣೆ ಆಗಿರಲಿಲ್ಲ. ಸುರೇಶ್‌ನ ತಂದೆ ಸೋಮವಾರ ಮನೆಗೆ ಬಂದು ಬುದ್ಧಿಮಾತು ಹೇಳಿದ್ದರು. ಅಂದು ರಾತ್ರಿ ಮನೆಯಿಂದ ಹೊರಹೋಗಿದ್ದ ಆತ ವಾಪಸ್ ಬಂದಿರಲಿಲ್ಲ. ಬುಧವಾರ ಬೆಳಿಗ್ಗೆ ಮನೆಗೆ ವಾಪಸ್ ಬಂದು ಕೃತ್ಯ ಎಸಗಿದ್ದಾನೆ’ ಎಂದು ರುಕ್ಮಿಣಿ ದೂರು ನೀಡಿದ್ದಾರೆ.
ಅಜ್ಜಿಗೆ ಕರೆ ಮಾಡಿದ್ದ ಮೊಮ್ಮಗ: ಸುರೇಶ್ ಮನೆಯ ಸಮೀಪದಲ್ಲೇ ರುಕ್ಮಿಣಿ ಅವರು ವಾಸವಿದ್ದರು. ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಅಜ್ಜಿಗೆ ಕರೆ ಮಾಡಿದ್ದ ಆರು ವರ್ಷದ ಮಗು, ‘ಅಮ್ಮ ಮಾತನಾಡುತ್ತಿಲ್ಲ. ತಕ್ಷಣವೇ ಬನ್ನಿ’ ಎಂದು ಮನವಿ ಮಾಡಿದ್ದ. ಅಜ್ಜಿ ಬಂದು ನೋಡವಾಗ ಮನೆಯ ಬಾಗಿಲು ಹಾಕಿತ್ತು. ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮಮತಾ ಉಸಿರಾಡುತ್ತಿರಲಿಲ್ಲ. ಮೂಗಿನಿಂದ ರಕ್ತ ಬಂದಿತ್ತು. ಸುರೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದು ಕಂಡುಬಂದಿತ್ತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.