ADVERTISEMENT

‘ಈಡಿಗ ಸಮುದಾಯದ ಬೃಹತ್ ಸಮಾವೇಶ’

ಒಂದೇ ವೇದಿಕೆಯಲ್ಲಿ ಸಂಘಟಿಸಲು ಸಮುದಾಯದ ಚಿಂತನ-ಮಂಥನ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 15:35 IST
Last Updated 8 ಮಾರ್ಚ್ 2025, 15:35 IST
ಸಭೆಯಲ್ಲಿ ವಿಖ್ಯಾತಾನಂದ ಸ್ವಾಮೀಜಿ, ಬಿ.ಕೆ.ಹರಿಪ್ರಸಾದ್, ಚಿನ್ನೇಗೌಡ, ಶ್ರೀನಿವಾಸ್ ಗೌಡ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು
ಸಭೆಯಲ್ಲಿ ವಿಖ್ಯಾತಾನಂದ ಸ್ವಾಮೀಜಿ, ಬಿ.ಕೆ.ಹರಿಪ್ರಸಾದ್, ಚಿನ್ನೇಗೌಡ, ಶ್ರೀನಿವಾಸ್ ಗೌಡ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು   

ಬೆಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿರುವ ಈಡಿಗ ಸಮುದಾಯದ 26 ಉಪ ಪಂಗಡಗಳು ಹಾಗೂ ಅವರ ಅನುಯಾಯಿಗಳನ್ನು ಒಂದೇ ವೇದಿಕೆಯಡಿ ಸಂಘಟಿಸಿ, ದಕ್ಷಿಣ ಭಾರತ ಮಟ್ಟದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲು ಸಮುದಾಯದ ಚಿಂತನ-ಮಂಥನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ನಗರದಲ್ಲಿ ಶನಿವಾರ ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಇತ್ಯಾದಿ 26 ಉಪಪಂಗಡಗಳನ್ನು ಒಳಗೊಂಡು ಆಯೋಜಿಸಿದ್ದ ‘ಈಡಿಗ ಜನಾಂಗದ ಇತಿಹಾಸ–ಅಭಿವೃದ್ಧಿಯ ಬಗ್ಗೆ ಒಂದು ಅವಲೋಕನ’ ಚಿಂತನ–ಮಂಥನ ಸಭೆಯಲ್ಲಿ, ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲಾಯಿತು.

ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ತೆಲಂಗಾಣದ ಮಾಜಿ ಸಚಿವ ಶ್ರೀನಿವಾಸ್ ಗೌಡ್, ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಶಾಸಕ ಶ್ರೀನಾಥ್, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಸದಸ್ಯ ಲಕ್ಷ್ಮಿನರಸಿಹಯ್ಯ ಹಾಗೂ ಸಮುದಾಯದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ದಕ್ಷಿಣ ಭಾರತದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಂಘಟಿತರಾಗಲು ಸಮುದಾಯದ 26 ಉಪ ಪಂಗಡಗಳು ಒಟ್ಟಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಬೇಕು. ಕನಿಷ್ಠ 5 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು.

ಸಮುದಾಯದ ಪ್ರಮುಖ ಒಂಬತ್ತು ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಅವುಗಳ ಈಡೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಮುಖಂಡರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಾಯಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. 

ಪ್ರಮುಖ ಬೇಡಿಕೆಗಳು

  • ನಾರಾಯಣಗುರು ಈಡಿಗ ಅಭಿವೃದ್ದಿ ನಿಗಮವನ್ನು ಕ್ರಿಯಾಶೀಲಗೊಳಿಸಿ ₹ 250 ಕೋಟಿ ಅನುದಾನ ಬಿಡುಗಡೆ ಮಾಡಬೇಕು

  • ಬ್ರಹ್ಮಶ್ರೀ ನಾರಾಯಣಗುರು ಅವರ ಪುತ್ಥಳಿಯನ್ನು ಜನಾಂಗದ ಕೇಂದ್ರವಾದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದಲ್ಲಿ ಸ್ಥಾಪಿಸಬೇಕು

  • ಮಂಗಳೂರು ವಿಶ್ವವಿದ್ಯಾಲಯದ ನಾರಾಯಣಗುರು ಅಧ್ಯಯನ ಪೀಠಕ್ಕೆ ₹ 5 ಕೋಟಿ ಅನುದಾನ ಬಿಡುಗಡೆ ಮಾಡಬೇಕು

  • ಕೋಟಿ-ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ಬಿಡುಗಡೆ ಮಾಡಬೇಕು –ಕುಲ ಕಸುಬು ಕಳೆದುಕೊಂಡಿರುವ ಈಡಿಗ ಸಮುದಾಯದ ಉಪ ಪಂಗಡಗಳ ಜನರ ಪುನರ್ ವಸತಿಗಾಗಿ ಪ್ಯಾಕೇಜ್ ಘೋಷಣೆ ಮಾಡಬೇಕು

  • ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗಳ ಪರವಾನಗಿ ನೀಡುವಾಗ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಈಡಿಗ ಸಮುದಾಯದ ಉಪ ಪಂಗಡಗಳಿಗೆ ಮೀಸಲಾತಿ ನೀಡಬೇಕು

  • ಶರಣ ಹೆಂಡದ ಮಾರಯ್ಯ ತಪಸ್ಸು ಮಾಡಿದ ಬಸವ ಕಲ್ಯಾಣದಲ್ಲಿ ಬಸದಿ ಕಟ್ಟಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು

  • ರಾಜ್ಯದಾದ್ಯಂತ ಈಡಿಗ ಜನಾಂಗದವರು ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯಗಳು ಮತ್ತು ಸಮುದಾಯ ಭವನಗಳಿಗೆ ವಿಶೇಷವಾಗಿ ಆರ್ಥಿಕ ನೆರವು ಕಲ್ಪಿಸಬೇಕು

  • ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನವನ್ನು ನಿರ್ಮಿಸಲು 10 ಎಕರೆ ಭೂಮಿಯನ್ನು ಮಂಜೂರಾತಿ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.