ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಹಲವು ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂದಿಗಳು ಜೈಲು ಒಳಗಿ
ನಿಂದಲೇ ‘ಅಕ್ರಮ ಚಟುವಟಿಕೆ’ ನಡೆಸುತ್ತಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಆರೋಪಿಗಳು ಹಾಗೂ ರೌಡಿಗಳ ಜತೆಗೆ ಕೈದಿಗಳು ಸಂಪರ್ಕದಲ್ಲಿ ಕೊಂಡು ಅಪರಾಧ ಚಟುವಟಿಕೆಗಳಲ್ಲಿ
ಪಾಲ್ಗೊಳ್ಳುತ್ತಿದ್ದಾರೆ ಎಂಬುದಕ್ಕೆ ಸಿಸಿಬಿ ಹಾಗೂ ವಿವಿಧ ಠಾಣೆಗಳ ಪೊಲೀಸರು, ಕೆಲವು ಪ್ರಕರಣಗಳ ತನಿಖೆ ನಡೆಸುತ್ತಿ ದ್ದಾಗ ಸಾಕ್ಷ್ಯಗಳು ಲಭಿಸಿವೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ ಮತ್ತು ಸಹಚರರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಆ ಸಂದರ್ಭದಲ್ಲಿ ಇಬ್ಬರಿಗೂ ‘ವಿಶೇಷ ಆತಿಥ್ಯ’ ನೀಡಿದ್ದ ಆರೋಪದಡಿ ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕ ಮತ್ತು ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿಯನ್ನು ಅಮಾನತು ಮಾಡಲಾಗಿತ್ತು. ಹಲವು ಕೈದಿಗಳನ್ನೂ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಅದಾದ ಮೇಲೂ ‘ಅಕ್ರಮ ಚಟುವಟಿಕೆ’ ಗಳಿಗೆ ಕಡಿವಾಣ ಬಿದ್ದಿಲ್ಲ ಎಂಬ ಆರೋಪವಿದೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಜೈಲಿನ ಒಳಗೆ ಮೊಬೈಲ್ ಬಳಕೆಯಾಗದಂತೆ ಹಾಗೂ ಕೈದಿಗಳಿಗೆ ಮೊಬೈಲ್ ಸಿಗದಂತೆ ಬಿಗಿಯಾದ ಕ್ರಮ ತೆಗೆದುಕೊಂಡಿತ್ತು. ಇದೀಗ ಮತ್ತೆ ಜೈಲಿನಲ್ಲಿ ಮೊಬೈಲ್ ಬಳಕೆ ಆಗುತ್ತಿರುವುದು ಗೊತ್ತಾಗಿದೆ.
‘ಮೊಬೈಲ್ ಬಳಸಿ ಜೈಲಿನಿಂದಲೇ ಹಣಕ್ಕಾಗಿ ಬೇಡಿಕೆ ಹಾಕುತ್ತಿರುವುದು, ಕೊಲೆ ಬೆದರಿಕೆ ಹಾಗೂ ಡ್ರಗ್ಸ್ ಮಾರಾಟಕ್ಕೆ ಸಂಚು ರೂಪಿಸಲಾಗುತ್ತಿದೆ. ಜೈಲಿನಲ್ಲಿ ಮತ್ತೆ ಲೋಪದೋಷಗಳು ಪತ್ತೆ ಆಗುತ್ತಿವೆ’ ಎಂದು ಮೂಲಗಳು ತಿಳಿಸಿವೆ.
‘ಪ್ರಕರಣವೊಂದರಲ್ಲಿ ರೌಡಿ ಸೈಕೊ ವಿಶ್ವನಾಥ್ ಎಂಬಾತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಜೈಲಿನಲ್ಲೇ ಕೂತು ಸೈಕೊ ವಿಶ್ವನಾಥ್, ವ್ಯಾಪಾರಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾನೆ. ಪ್ರತಿ ವಾರ ತನ್ನ ಸಹಚರರಿಗೆ ₹40 ಸಾವಿರ ಮಾಮೂಲಿ ನೀಡಬೇಕು. ಇಲ್ಲದಿದ್ದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ. ಸೈಕೊ ವಿಶ್ವನಾಥ್ ವಿರುದ್ಧ ಸಿಸಿಬಿಗೆ ವ್ಯಾಪಾರಿ ದೂರು ನೀಡಿದ್ದು, ಬಾಡಿ ವಾರಂಟ್ ಮೇಲೆ ಕೈದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ’ ಎಂದು
ಅಧಿಕಾರಿಯೊಬ್ಬರು ತಿಳಿಸಿದರು.
ಡ್ರಗ್ಸ್ ದಂಧೆ ನಡೆಸುತ್ತಿದ್ದ ಮನೆಗಳ ಮೇಲೆ ಅಶೋಕ ನಗರ ಠಾಣೆಯ ಪೊಲೀಸರು ಡಿಸೆಂಬರ್ 17ರಂದು ದಾಳಿ ನಡೆಸಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಮನೆಪಲ್ಲೆ ನಿವಾಸಿ, ಬೆಂಗಳೂರು ವೀರೇಶ್ ನಗರದಲ್ಲಿ ನೆಲಸಿದ್ದ ಶ್ರೀಕಾಂತ್, ಆರ್.ಟಿ. ನಗರದ ನಿವಾಸಿ ಮುನಿರಾಜ್, ಚಾಮುಂಡೇಶ್ವರಿ ನಗರದ ಚಂದ್ರಕಾಂತ್ ಎಂಬುವರನ್ನು ಬಂಧಿಸಿದ್ದರು. ತನಿಖೆ ಮುಂದುವರೆಸಿದಾಗ, ಜೈಲಿನಲ್ಲಿದ್ದ ಸಜಾ ಕೈದಿಯ ಸೂಚನೆ ಮೇರೆಗೆ ಮೂವರು ಡ್ರಗ್ಸ್ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ.
‘ಆನೇಕಲ್ ತಾಲ್ಲೂಕು ಕಲ್ಲಬಾಳು ಗ್ರಾಮದ ವಿ.ಬಾಲಕೃಷ್ಣ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ. ಆತ ಜೈಲಿನಲ್ಲೇ ಕುಳಿತು ಮೊಬೈಲ್ ಬಳಸಿ ಸಹಚರರಿಗೆ ಡ್ರಗ್ಸ್ ಮಾರಾಟಕ್ಕೆ ಸಲಹೆ–ಸೂಚನೆ ನೀಡುತ್ತಿದ್ದ. ಬಾಲಕೃಷ್ಣ ಸೂಚನೆ ಮೇರೆಗೆ ದಂಧೆ ನಡೆಯುತ್ತಿರುವುದನ್ನು ಪತ್ತೆಹಚ್ಚಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ಬಾಲಕೃಷ್ಣ ಸೂಚನೆಯಂತೆ ಆಂಧ್ರಪ್ರದೇಶ ವಿಶಾಖಪಟ್ಟಣಕ್ಕೆ ತೆರಳಿ ಡ್ರಗ್ಸ್ ಸಂಗ್ರಹಿಸಿ ನಗರಕ್ಕೆ ತರುತ್ತಿದ್ದರು. ಅದನ್ನು ನಗರದಲ್ಲಿ ಇತರೆ ಪೆಡ್ಲರ್‌ಗಳು ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.
ಪರಪ್ಪನ ಅಗ್ರಹಾರದಲ್ಲಿದ್ದ ಕೈದಿ ಸೂಚನೆಯಂತೆ ಆಂಧ್ರದಿಂದ ಡ್ರಗ್ಸ್ ಅನ್ನು ಮೂವರು ತರುತ್ತಿದ್ದರು. ಸೂಚನೆ ನೀಡುತ್ತಿದ್ದ ಕೈದಿಯನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲಾಗಿದೆಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.