ಬೆಂಗಳೂರು: ‘ನಗರದಲ್ಲಿ ದಿನನಿತ್ಯ ಅಕ್ರಮ ಕಟ್ಟಡ, ಬಡಾವಣೆ ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಏನ್ ಮಾಡ್ತಾ ಇದ್ದೀರಾ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು.
ನಗರ ವ್ಯಾಪ್ತಿಯ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿ ಮಂಗಳವಾರ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಜತೆ ಸಭೆ ನಡೆಸಿದರು.
‘ಅನುಮತಿ ನೀಡಿದ ಪ್ರದೇಶಕ್ಕೂ ಮೀರಿ ಅನಧಿಕೃತ ಬಡಾವಣೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕು. ಅಕ್ರಮ ಲೇಔಟ್ ನಿರ್ಮಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸೂಚನೆ ನೀಡಿದ ನಂತರವೂ ಗೋಮಾಳಗಳಲ್ಲಿ ಬಡಾವಣೆ ಮಾಡಿದವರ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
‘ಈವರೆಗೂ ನಗರ ಹಾಗೂ ಸುತ್ತಮುತ್ತ ಅಕ್ರಮ ಬಡಾವಣೆಗಳಲ್ಲಿ ನಿರ್ಮಿಸಿರುವ ಎಷ್ಟು ಮನೆಗಳನ್ನು ನೆಲಸಮ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದೀರಿ, ನಕಲಿ ದಾಖಲೆ ಸೃಷ್ಟಿಸುವವರು ತಮ್ಮ ಕೆಲಸ ಮುಂದುವರಿಸಿದ್ಧಾರೆ. ಕಾನೂನು ಉಲ್ಲಂಘಿಸಿ ಬಡಾವಣೆ ಮಾಡುವವರಿಗೆ ಕರುಣೆ ತೋರಿಸುವ ಅಗತ್ಯ ಇಲ್ಲ’ ಎಂದರು.
‘ಖಾಲಿ ಜಾಗ, ಸರ್ಕಾರಿ ಜಮೀನಿಗೆ ಬೇಲಿ ಇಲ್ಲವೇ ರಕ್ಷಣಾ ಗೋಡೆ ಹಾಕಲೇಬೇಕು. ನಕಾಶೆ ರಸ್ತೆ ಎಷ್ಟು ಒತ್ತುವರಿ ಆಗಿದೆ ಎಂಬ ಕುರಿತು ಮೊದಲು ಮಾಹಿತಿ ಸಂಗ್ರಹಿಸಬೇಕು. ಮತ್ತೆ ಒತ್ತುವರಿ ಆದರೆ ತಹಶೀಲ್ದಾರ್ ಅವರೇ ಜವಾಬ್ದಾರರಾಗುತ್ತಾರೆ’ ಎಂದು ಎಚ್ಚರಿಸಿದರು.
'ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ ಶೇ 97 ರಷ್ಟು ಸರ್ಕಾರಿ ಭೂಮಿಯನ್ನು ಗುರುತಿಸಿ ಡೇಟಾ ಎಂಟ್ರಿ ಮಾಡಲಾಗಿದೆ. ಈ ಮಾಹಿತಿ ಉಪಯೋಗಿಸಿಕೊಂಡು ನೈಜಸ್ಥಿತಿಯನ್ನು ದಿಶಾ ಆ್ಯಪ್‌ನಲ್ಲಿ ಅಪ್ಡೇಟ್ ಮಾಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.