
ಕೆ.ಆರ್.ಪುರ: ರಾಜ್ಯ ಹೆದ್ದಾರಿಗಳಲ್ಲಿ ಜಾಹೀರಾತು ಫಲಕ ಅಳವಡಿಸದಿರಲು ಹೈಕೋರ್ಟ್ ನಿರ್ದೇಶನವಿದ್ದರೂ ನಿಯಮಗಳನ್ನು ಗಾಳಿಗೆ ತೂರಿ, ಅನಧಿಕೃತವಾಗಿ ಪ್ರದರ್ಶಿಸಲಾಗುತ್ತಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೂದಿಗೆರೆ ಕ್ರಾಸ್ ಹಾಗೂ ಕಾಟಂನಲ್ಲೂರು ಮೂಲಕ ಆನೇಕಲ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಈ ಫಲಕಗಳಿಂದ ನಿತ್ಯವೂ ಒಂದಿಲ್ಲೊಂದು ಅಪಘಾತವಾಗುತ್ತಿದ್ದು, ಜನರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ.
ಮಹದೇವಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳಿರುವ ಬಗ್ಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ದೂರಿದರು.
ತಿರುಮೇನಹಳ್ಳಿ ಗೇಟ್, ಮಂಡೂರು, ಬೊಮ್ಮೆನಹಳ್ಳಿ ಗೇಟ್, ಬೂದಿಗೆರೆ ಕ್ರಾಸ್‌ವರೆಗೆ ಹಾಗೂ ಕಾಟಂನಲ್ಲೂರು ಗೇಟ್‌ನಿಂದ, ಗೊರವೆಗೆರೆ, ಸಫಲ್ ಗೇಟ್, ಕನ್ನಮಂಗಲ ಗೇಟ್‌ವರೆಗೆ 100 ಆಡಿಗೆ ಒಂದರಂತೆ ಬೃಹತ್ ಹಾಗೂ 10 ಅಡಿಗೆ ಒಂದರಂತೆ ಚಿಕ್ಕ ನೂರಾರು ಅನಧಿಕೃತ ಜಾಹೀರಾತು ಫಲಕಗಳು ರಾಜಾಜಿಸುತ್ತಿವೆ. ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಬೃಹತ್ ಜಾಹೀರಾತು ಫಲಕ ಕಾರಿನ ಮೇಲೆ ಬಿದ್ದು, ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದವು.
‘ಫಲಕಗಳನ್ನು ತೆರವು ಮಾಡಲು ಕಾಟಾಚಾರಕ್ಕೆ ಮಾಲೀಕರಿಗೆ ನೋಟೀಸ್ ನೀಡಿದಂತೆ ಮಾಡಿ ಮತ್ತೆ ಜಾಹೀರಾತು ಫಲಕಗಳು ಹೆಚ್ಚಾಗಲು ಅಧಿಕಾರಿಗಳೇ ಕಾರಣರಾಗಿದ್ದಾರೆ’ ಎಂದು ಭೀಮ್ ಪ್ರಜಾ ಸಂಘದ ಅಧ್ಯಕ್ಷ ವೈಟ್ ಫಿಲ್ಢ್ ಮುರುಗೇಶ್ ಆರೋಪಿಸಿದರು.
‘ವಾಹನ ಸವಾರರಿಗೆ ತೊಂದರೆಯಾಗಿರುವ ಜಾಹೀರಾತು ಫಲಕಗಳನ್ನು ಮುಲಾಜಿಲ್ಲದೆ ತೆರವು ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಆದಿಜಾಂಭವ ಜನಸಂಘದ ಯುವ ಘಟಕದ ಅಧ್ಯಕ್ಷ ವೇಣು ಆಕ್ರೋಶ ವ್ಯಕ್ತಪಡಿಸಿದರು.
‘ಮಹದೇವಪುರ ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ಈ ಸಮಸ್ಯೆ ಶೀಘ್ರದಲ್ಲಿ ಪರಿಹರಿಸದಿದ್ದರೆ ಕೆ.ಆರ್.ಎಸ್ ಪಕ್ಷದಿಂದ ಹೋರಾಟ ನಡೆಸಲಾಗುವುದು’ ಎಂದು ಮಹದೇವಪುರ ಕ್ಷೇತ್ರದ ಕೆಆರ್‌ಎಸ್ ಪಕ್ಷದ ಮುಖಂಡ ಪಟ್ಟಂದೂರು ಅಗ್ರಹಾರ
ಎಂ.ಮಂಜುನಾಥ್ ಹೇಳಿದರು.
ತೆರವಿಗೆ ಸೂಚನೆ: ‘ಜಾಹೀರಾತು ಫಲಕ ಹಾಕುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಕೆಲವರು ತೆರವಿಗೆ ತಡೆಯಾಜ್ಞೆ ತರುತ್ತಿದ್ದಾರೆ. ಇದನ್ನು ತೆರವು ಮಾಡಲು ವಕೀಲರ ತಂಡವನ್ನು ನೇಮಿಸಲಾಗಿದೆ. ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಸುಶೀಲಮ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.