ADVERTISEMENT

ಔಷಧ ಕಾನೂನುಬಾಹಿರ ಮಾರಾಟ: ಸಾವಿರಕ್ಕೂ ಅಧಿಕ ಮಳಿಗೆಗಳ ಪರವಾನಗಿ ಅಮಾನತು

ವರುಣ ಹೆಗಡೆ
Published 8 ಜನವರಿ 2025, 23:30 IST
Last Updated 8 ಜನವರಿ 2025, 23:30 IST
   

ಬೆಂಗಳೂರು: ಖಾಸಗಿ ಔಷಧ ಮಳಿಗೆಗಳು ಕಾನೂನು ಬಾಹಿರವಾಗಿ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಔಷಧ ನಿಯಂತ್ರಣ ಇಲಾಖೆ ನಡೆಸಿದ ಪರಿಶೀಲನೆಯಿಂದ ದೃಢಪಟ್ಟಿದೆ. ಅಂತಹ ಸಾವಿರಕ್ಕೂ ಅಧಿಕ ಔಷಧ ಮಳಿಗೆಗಳ ಪರವಾನಗಿ ಅಮಾನತು ಮಾಡಲಾಗಿದೆ.

ಔಷಧ ಮಳಿಗೆಗಳು ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿ ಕಾರ್ಯನಿರ್ವಹಿಸಬೇಕಿದೆ. ರಾಜ್ಯದಲ್ಲಿ 37 ಸಾವಿರಕ್ಕೂ ಅಧಿಕ ಖಾಸಗಿ ಔಷಧ ಮಳಿಗೆಗಳಿವೆ. ಅವುಗಳ ಕಾರ್ಯವಿಧಾನ ಪರಿಶೀಲನೆ ಹಾಗೂ ಸಾರ್ವಜನಿಕರ ದೂರುಗಳ ಅನ್ವಯ ಔಷಧ ನಿಯಂತ್ರಕರನ್ನು ಒಳಗೊಂಡ ತಂಡವು ನಿಯಮಿತವಾಗಿ ರಾಜ್ಯದ ವಿವಿಧೆಡೆ ಪರಿಶೀಲನೆ ನಡೆಸುತ್ತಿದೆ.

ಔಷಧ ನಿಯಂತ್ರಣ ಇಲಾಖೆ ಪ್ರಕಾರ, 2023–24ನೇ ಸಾಲಿನಲ್ಲಿ 21,694 ಔಷಧ ಮಳಿಗೆಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಸಾವಿರಾರು ಮಳಿಗೆಗಳು ನಿಯಮಬಾಹಿರ ಕಾರ್ಯನಿರ್ವಹಿಸುತ್ತಿರುವುದು ದೃಢಪಟ್ಟಿದೆ. ಈ ಕಾರಣ 1,245 ಔಷಧ ಮಳಿಗೆಗಳ ಪರವಾನಗಿ ಅಮಾನತುಗೊಳಿಸಿದರೆ, 292 ಔಷಧ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ADVERTISEMENT

ಔಷಧ ನಿಯಂತ್ರಣಾಧಿಕಾರಿಗಳು ನಡೆಸಿದ ಪರಿಶೀಲನೆ ಅವಧಿಯಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ಮಾರಾಟ, ಅವಧಿ ಮೀರಿದ ಔಷಧ ವಿತರಣೆ, ಗೊತ್ತುಪಡಿಸಿದ ದರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ, ಅಗತ್ಯ ವಿದ್ಯಾರ್ಹತೆ ಹೊಂದಿರದಿರುವುದು, ಫಾರ್ಮಾಸಿಸ್ಟ್‌ಗಳ ಗೈರು ಹಾಜರಿಯಲ್ಲಿ ಔಷಧ ಮಾರಾಟ, ಅವಧಿ ಮೀರಿದ ಔಷಧಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದಿರುವುದು, ವೈದ್ಯರು ಸೂಚಿಸಿದ ಕಂಪನಿಯ ಔಷಧದ ಬದಲು ಬೇರೆ ಕಂಪನಿಯ ಔಷಧ ವಿತರಣೆ ಸೇರಿ ವಿವಿಧ ಬಗೆಯಲ್ಲಿ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಈ ಕಾರಣಕ್ಕೆ ಪರವಾನಗಿಯನ್ನು ಅಮಾನತು ಮಾಡಲಾಗಿದೆ. 

ಮಾದಕ ಔಷಧ ಮಾರಾಟ:

 ಔಷಧ ನಿಯಂತ್ರಣಾಧಿಕಾರಿ ಒಳಗೊಂಡ ತಂಡವು ನಡೆಸಿದ ದಾಳಿ ವೇಳೆ ಕೆಲ ಮಳಿಗೆಗಳಲ್ಲಿ ಕಾನೂನು ಬಾಹಿರವಾಗಿ ಮಾದಕ ಔಷಧವನ್ನು ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ. ನಿಯಮಿತವಾಗಿ ಔಷಧ ಮಳಿಗೆಗಳ ಪರಿಶೀಲನೆ ಜತೆಗೆ ಮಾದಕ ವಸ್ತುಗಳ ದುರ್ಬಳಕೆ ತಡೆಗೆ ವರ್ಷದಲ್ಲಿ ಮೂರು ದಿನ ವಿಶೇಷ ಪರೀಕ್ಷಾರ್ಥ ದಾಳಿ ನಡೆಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 600ಕ್ಕೂ ಅಧಿಕ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದ್ದು, 400ಕ್ಕೂ ಅಧಿಕ ಮಳಿಗೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಕಾನೂನುಬಾಹಿರ ಮಾದಕ ಔಷಧಗಳ ಮಾರಾಟದ ಕಾರಣಕ್ಕೆ 80ಕ್ಕೂ ಅಧಿಕ ಮಳಿಗೆಗಳ ಪರವಾನಗಿಯನ್ನು ಅಮಾನತು ಮಾಡಲಾಗಿದೆ.

‘ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿ ಖಾಸಗಿ ಔಷಧ ಮಳಿಗೆಗಳನ್ನು ನಿಯಂತ್ರಿಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಪತ್ತೆ ಸಂಬಂಧ ಮಳಿಗೆಗಳ ಮೇಲೆ ಅಧಿಕಾರಿಗಳ ತಂಡವು ನಿಯಮಿತವಾಗಿ ದಾಳಿ ನಡೆಸುತ್ತಿದೆ’ ಎಂದು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಔಷಧ ಮಳಿಗೆಗಳು ನಿಯಮ ಉಲ್ಲಂಘಿಸಿದಲ್ಲಿ ಪರವಾನಗಿ ಅಮಾನತ್ತು ರದ್ದತಿ ಮಾಡಲಾಗುತ್ತಿದೆ. ಮಾದಕ ವಸ್ತುಗಳ ನಿಯಮಬಾಹಿರ ಮಾರಾಟದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ರಾಜಧಾನಿಯಲ್ಲಿಯೇ ಅಧಿಕ 

ಕಾನೂನು ಬಾಹಿರ ಮಾದಕ ಔಷಧಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾದಕ ಪದಾರ್ಥಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿ ಎರಡು ವರ್ಷಗಳಲ್ಲಿ 23 ಮಳಿಗೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವುಗಳಲ್ಲಿ 11 ಮಳಿಗೆಗಳು ಬೆಂಗಳೂರಿನಲ್ಲಿಯೇ ಇವೆ. ಶೋಕಾಸ್ ನೋಟಿಸ್ ನೀಡಲಾದ ಮಳಿಗೆಗಳ ಪಟ್ಟಿಯಲ್ಲಿಯೂ ಬೆಂಗಳೂರಿನ ಮಳಿಗೆಗಳೇ ಅಧಿಕ ಸಂಖ್ಯೆಯಲ್ಲಿದ್ದು 2022–23 ರಲ್ಲಿ 93 ಹಾಗೂ 2023–24ರಲ್ಲಿ 45 ಮಳಿಗೆಗಳು ಶೋಕಾಸ್ ನೋಟಿಸ್ ಪಡೆದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.