
ಬೆಂಗಳೂರು: ರಾಜ್ಯದಲ್ಲಿ ಇ–ಕಾಮರ್ಸ್ ಜಾಲತಾಣ ಮತ್ತು ಆ್ಯಪ್‌ಗಳಲ್ಲಿ ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಸಿಐಡಿ ಸೈಬರ್ ವಿಭಾಗದ ಎಸ್‌ಪಿ ಅವರಿಗೆ ಮನವಿ ಮಾಡಿದ್ದಾರೆ.
ಜಾಲತಾಣಗಳು ಎಚ್ಚರಿಕೆ ಸಂದೇಶಗಳಿಲ್ಲದ ತಂಬಾಕು ಉತ್ಪನ್ನಗಳ ವ್ಯಾಪಾರ ನಡೆಸುವ ಮೂಲಕ ಮುಖ್ಯವಾಗಿ ಯುವಜನರನ್ನು ದುಶ್ಚಟಕ್ಕೆ ಒಳಗಾಗುವಂತೆ ಮಾಡುತ್ತಿದೆ. ಈ ಬಗ್ಗೆ ದೂರು ಸ್ವೀಕೃತವಾಗಿದೆ. ಈ ರೀತಿ ಮಾರಾಟವು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ (ಕೋಟ್ಪಾ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಬ್ಲಿಂಕಿಟ್, ಜೊಮ್ಯಾಟೊ, ಸ್ವಿಗ್ಗಿ, ಬಿಗ್‌ಬಾಸ್ಕೆಟ್, ಝೆಪ್ಟೊ ಇತ್ಯಾದಿ ಆ್ಯಪ್‌ಗಳ ಮೂಲಕ ಆರೋಗ್ಯ ಎಚ್ಚರಿಗೆ ಸಂದೇಶಗಳಿಲ್ಲದ ತಂಬಾಕು ಉತ್ಪನ್ನಗಳು ಮಾರಾಟವಾಗುತ್ತಿದ್ದು, ಇದರಿಂದ ಅಪ್ರಾಪ್ತ ಮಕ್ಕಳು ವಿಷಕಾರಿ ಕ್ಯಾನ್ಸರ್ ಕಾರಕ ತಂಬಾಕು ಉತ್ಪನ್ನಗಳನ್ನು ಸೇವಿಸಲು ಉತ್ತೇಜಿಸಿದಂತೆ ಆಗುತ್ತದೆ. ಈ ಉತ್ಪನ್ನಗಳು ಸುಲಭ ಲಭ್ಯತೆಗೂ ದಾರಿಮಾಡಿ ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಜಾಲತಾಣ ಮತ್ತು ಆ್ಯಪ್‌ಗಳ ಮೇಲೆ ತುರ್ತಾಗಿ ಕಾನೂನು ಕ್ರಮಕೈಗೊಳ್ಳಬೇಕು. ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ರಾಜ್ಯ ತಂಬಾಕು ನಿಯಂತ್ರಣ ಘಟಕಕ್ಕೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.