ADVERTISEMENT

ಐಎಂಎ ಮಳಿಗೆಯಲ್ಲಿ ₹ 83 ಲಕ್ಷ ಮೌಲ್ಯದ ಆಭರಣ ಜಪ್ತಿ!

ಎಸ್‌ಐಟಿ ಅಧಿಕಾರಿಗಳಿಂದ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:50 IST
Last Updated 25 ಜೂನ್ 2019, 19:50 IST
ಮನ್ಸೂರ್ ಖಾನ್
ಮನ್ಸೂರ್ ಖಾನ್   

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿರುವ ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಕೈಗೊಂಡಿರುವ ಎಸ್‌ಐಟಿ ಅಧಿಕಾರಿಗಳು, ಕಂಪನಿ ಮಾಲೀಕ ಮನ್ಸೂರ್ ಖಾನ್ ಒಡೆತನದ ‘ಐಎಂಎ ಗೋಲ್ಡ್‌ ಲೋನ್’ ಹೆಸರಿನ ಎರಡು ಮಳಿಗೆಗಳ ಮೇಲೆ ಸೋಮವಾರ ದಾಳಿ ಮಾಡಿದರು.

ನ್ಯಾಯಾಲಯದ ಅನುಮತಿ ಪಡೆದು ತಿಲಕ್‌ನಗರ ಹಾಗೂ ಯಶವಂತಪುರದಲ್ಲಿರುವ ಮಳಿಗೆಗಳಲ್ಲಿ ಬೆಳಿಗ್ಗೆ 9ರಿಂದ ರಾತ್ರಿಯವರೆಗೂ ಅಧಿಕಾರಿಗಳು ಶೋಧ ನಡೆಸಿದರು. ಎರಡೂ ಮಳಿಗೆಯಲ್ಲಿ ₹ 83.24 ಲಕ್ಷ ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿದರು.

‘ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ತಲೆಮರೆಸಿಕೊಂಡು, ಆತನ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ. ಕಂಪನಿ ಹಾಗೂ ಆತನ ಹೆಸರಿಗಿರುವ ಆಸ್ತಿಗಳನ್ನು ಪಟ್ಟಿ ಮಾಡಿದ್ದೇವೆ. ನ್ಯಾಯಾಲಯದ ಅನುಮತಿ ಪಡೆದು ಒಂದೊಂದೇ ಆಸ್ತಿಗಳ ಮೇಲೆ ದಾಳಿ ಮಾಡಲಾಗುತ್ತಿದೆ’ ಎಂದು ಎಸ್‌ಐಟಿ ತಂಡದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಹೇಳಿದರು.

ADVERTISEMENT

‘ತಿಲಕ್‌ನಗರದಲ್ಲಿರುವ ‘ಐಎಂಎ ಗೋಲ್ಡ್‌ ಲೋನ್’ ಮಳಿಗೆಯಲ್ಲಿ ₹ 41.60 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 2.20 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ₹2,000 ನಗದು ಸಿಕ್ಕಿವೆ. ಯಶವಂತಪುರದಲ್ಲಿರುವ ಮಳಿಗೆಯಲ್ಲಿ ₹ 31.04 ಲಕ್ಷ ಮೌಲ್ಯದ ಚಿನ್ನಾ
ಭರಣ ಹಾಗೂ ₹ 8.40 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿಗಳು ಪತ್ತೆ ಆಗಿವೆ’ ಎಂದರು.

ಗೃಹ ಇಲಾಖೆಗೆ ಮಾಹಿತಿ: ಆರೋಪಿ ಮನ್ಸೂರ್ ಖಾನ್‌ ಅವರದ್ದು ಎನ್ನಲಾದ ವಿಡಿಯೊ ಭಾನುವಾರವಷ್ಟೇ ಬಿಡುಗಡೆಯಾಗಿದೆ. ಆ ಸಂಬಂಧ ಎಸ್‌ಐಟಿ ಅಧಿಕಾರಿಗಳು, ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ’ಆರೋಪಿ ಎಲ್ಲಿದ್ದಾನೆ ಎಂಬ ಸುಳಿವು ಈಗಾಗಲೇ ಲಭ್ಯವಾಗಿದೆ. ಆತನನ್ನು ವಶಕ್ಕೆ ಪಡೆಯಲು ಕೇಂದ್ರ ಗೃಹ ಇಲಾಖೆಯ ನೆರವು ಬೇಕು. ಹೀಗಾ
ಗಿಯೇ ಆರೋಪಿ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ವಿಡಿಯೊವನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ, ಅದು ಅಸಲಿಯೋ ಅಥವಾ ನಕಲಿಯೋ ಎಂಬುದು ತಿಳಿಯಲಿದೆ’ ಎಂದು ಮೂಲಗಳು ಹೇಳಿವೆ.

ಗೃಹಸಚಿವರಿಗೆ ಮಾಹಿತಿ ನೀಡಿದ ಎಸ್‌ಐಟಿ

ಪ್ರಕರಣದ ಸಂಬಂಧ ಇದುವರೆಗಿನ ತನಿಖಾ ಪ್ರಗತಿ ಬಗ್ಗೆ ಎಸ್‌ಐಟಿ ಅಧಿಕಾರಿಗಳು, ಗೃಹ ಸಚಿವ ಎಂ.ಬಿ. ಪಾಟೀಲ ಅವರಿಗೆ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿರುವ ಸಚಿವರ ಕಚೇರಿಗೆ ಸೋಮವಾರ ಹೋಗಿದ್ದ ಎಸ್‌ಐಟಿ ತಂಡದ ಮುಖ್ಯಸ್ಥ ರವಿಕಾಂತೇಗೌಡ ನೇತೃತ್ವದ ತಂಡ, ಆರೋಪಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದರು.

ಮನ್ಸೂರ್ ಖಾನ್ ವಂಚನೆ ವಿಷಯವನ್ನು ಇದೇ 28ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲೂ ಸಚಿವ ಪಾಟೀಲ ಪ್ರಸ್ತಾಪಿಸುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಅವರು ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದಿರುವುದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.