ADVERTISEMENT

ರಾಜ್ಯದಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿಗೊಳಿಸಿ: ಮಾವಳ್ಳಿ ಶಂಕರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:09 IST
Last Updated 17 ಫೆಬ್ರುವರಿ 2026, 16:09 IST
ಮಾವಳ್ಳಿ ಶಂಕರ್
ಮಾವಳ್ಳಿ ಶಂಕರ್   

ಬೆಂಗಳೂರು: ‘ರಾಜ್ಯದಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿ ಮಾಡುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು’ ಎಂದು ರೋಹಿತ್‌ ಕಾಯ್ದೆಗಾಗಿ ಜನಾಂದೋಲನ ಕರ್ನಾಟಕ ಆಗ್ರಹಿಸಿದೆ. 

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಜನಾಂದೋಲನದ ಪರವಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ನಿವಾರಣೆಗೆ ಈ ಕಾಯ್ದೆ ಸಹಕಾರಿ. ಕಾಂಗ್ರೆಸ್ ಪಕ್ಷವು 2024ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಕಾಯ್ದೆ ಜಾರಿಗೊಳಿಸುವ ಭರವಸೆ ನೀಡಿತ್ತು. 2025ರ ಏಪ್ರಿಲ್‌ನಲ್ಲಿ ರಾಹುಲ್ ಗಾಂಧಿ ಅವರ ಕರೆಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಮಾಡು ವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯ ಎದುರಿಸುತ್ತಿರುವವರಿಗೆ ಹೊಸ ಭರವಸೆ ಮೂಡಿಸಿತ್ತು. ಆದರೆ, ಈವರೆಗೂ ಮಸೂದೆಯ ಕರಡನ್ನು ಸಾರ್ವಜನಿಕವಾಗಿ ಚರ್ಚೆಗೆ ಬಿಡುಗಡೆ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಈ ಕಾಯ್ದೆಯನ್ನು ಜಾರಿಗೊಳಿಸುವಂತೆ ಸಿದ್ದರಾಮಯ್ಯ ಅವರು ಸೂಚಿಸುವ ಜತೆಗೆ, ಬಜೆಟ್ ಅಧಿವೇಶನದಲ್ಲಿ ಘೋಷಿಸಬೇಕು. ವಿಧಾನಸಭೆಯಲ್ಲಿ ಇದನ್ನು ಮಂಡಿಸಲು ಮತ್ತು ಅಂಗೀಕರಿಸಲು ಸ್ಪಷ್ಟವಾದ ವೇಳಾಪಟ್ಟಿ ಘೋಷಿಸಬೇಕು’ ಎಂದು ಆಗ್ರಹಿಸಿದರು. 

ADVERTISEMENT

ಸುದ್ದಿಗೋಷ್ಠಿಯಲ್ಲಿ ಆಂದೋಲನದ ಪರವಾಗಿ ಬಸವರಾಜ್ ಕೌತಾಳ್, ಹುಲಿಕುಂಟೆ ಮೂರ್ತಿ, ರಾಹುಲ್, ಲೇಖಾ ಮತ್ತು ಆಶ್ನಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.