ADVERTISEMENT

ಸೈಬರ್ ಅಪರಾಧ ತಡೆಗೆ ಹೊಸ ತಂತ್ರಜ್ಞಾನ: ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 15:59 IST
Last Updated 17 ಜುಲೈ 2025, 15:59 IST
 ಸೀಮಂತ್ ಕುಮಾರ್ ಸಿಂಗ್
 ಸೀಮಂತ್ ಕುಮಾರ್ ಸಿಂಗ್   

ಬೆಂಗಳೂರು: ‘ಪೊಲೀಸ್ ಅಧಿಕಾರಿ ರೂಮ್ ಅಥವಾ ಠಾಣೆಯಲ್ಲಿ ಕೂತು ಕೆಲಸ ಮಾಡಿದರೆ ಸಾಲದು. ಜನ ಸಾಮಾನ್ಯರ ಜೊತೆ ಬೆರೆಯಬೇಕು, ಜನಸ್ನೇಹಿ ಕೆಲಸಗಳನ್ನು ಮಾಡಿದಾಗ ಮಾತ್ರ ನಮ್ಮ ಕೆಲಸಕ್ಕೆ ಮಾನ್ಯತೆ ದೊರೆಯಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಗುರುವಾರ ಪ್ರೆಸ್‌ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಸೈಬರ್ ಅಪರಾಧ ತಡೆಯಲು ಹೊಸ ತಂತ್ರಜ್ಞಾನಗಳನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳುವುದರ ಜತೆಗೆ ಸುಳ್ಳು ಸುದ್ದಿ ಹಬ್ಬಿಸುವ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಜನಸಾಮಾನ್ಯರ ಮಾನಹಾನಿ, ಆಸ್ತಿ ಪಾಸ್ತಿಗಳ ರಕ್ಷಣೆ ಮಾಡಲು ಉತ್ತಮ ತಂತ್ರಜ್ಞಾನ ಸೇರಿದಂತೆ 6 ಲಕ್ಷ ಸಿ.ಸಿ.ಟಿ.ವಿ. ಕ್ಯಾಮೆರಾಗಳಿಗೆ ಜಿಯೋಟ್ಯಾಗ್ ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಸಾಮಾಜಿಕ ಜಾಲತಾಣ ಹಾಗೂ ಸೈಬರ್ ಅಪರಾಧಕ್ಕೆ ನೇರ ಸಂಪರ್ಕವಿದೆ. ಸಂಚಾರ ಸಮಸ್ಯೆಗೆ ಈಗಾಗಲೇ ಬಿಬಿಎಂಪಿ ಆಯುಕ್ತರು ಸೇರಿ ಅನೇಕ ಅಧಿಕಾರಿಗಳ ಜತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲಾಗುವುದು. ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ಪೊಲೀಸ್ ಠಾಣೆಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಒತ್ತಡದಿಂದಾಗಿ ಪೊಲೀಸ್ ಅಧಿಕಾರಿಗಳು ಕೆಲವು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ, ದಾಖಲೆ ಸಂಗ್ರಹಿಸಿ ನ್ಯಾಯಾಲಯಕ್ಕೆ ಒಪ್ಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ADVERTISEMENT

ವ್ಹೀಲಿ ಮಾಡುವವರ ಮೇಲೆ ನಿಗಾವಹಿಸಿದ್ದು, ವ್ಹೀಲಿಗಾಗಿ ದ್ವಿಚಕ್ರ ವಾಹನಗಳನ್ನು ವಿನ್ಯಾಸಗೊಳಿಸುವ ಗ್ಯಾರೇಜ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ರೌಡಿಸಂ ನಿಯಂತ್ರಣದಲ್ಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟೆ ಇದ್ದರು. ‌

ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಅಚ್ಚುಮೆಚ್ಚು

‘ರಾಜ್ಯಕ್ಕೆ ಐಪಿಎಸ್ ಐಎಎಸ್ ಅಥವಾ ಕೇಂದ್ರ ಸರ್ಕಾರದಿಂದ ಆಯ್ಕೆಯಾಗಿ ಬರುವ ಯಾವುದೇ ಅಧಿಕಾರಿಗಳಿಗೆ ಮೊದಲು ಆಯಾ ರಾಜ್ಯಗಳ ಭಾಷೆ ಸಂಸ್ಕೃತಿಯ ಬಗ್ಗೆ ಗೌರವ ಇರಬೇಕು. ನನ್ನ ಜೊತೆ ಬಂದ ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ. ಆದರೆ ಅವರು ಯಾರೂ ಕರ್ನಾಟಕವನ್ನು ಬಿಟ್ಟುಹೋಗಿಲ್ಲ. ನನ್ನ ಮಗಳು 10ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಶೇಕಡ 99 ಅಂಕ ಪಡೆದಿದ್ದಾಳೆ’ ಎಂದು ಕನ್ನಡ ಭಾಷೆಯ ಬಗ್ಗೆ ಸೀಮಂತ್ ಕುಮಾರ್ ಅವರು ಹೆಮ್ಮೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.