ಬೆಂಗಳೂರು: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯುವ ವ್ಯವಸ್ಥೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಲ್ಲಿ (ಬಿಡಿಎ) ಇನ್ನೂ ಜಾರಿಯಾಗಿಲ್ಲ. ಹೀಗಾಗಿ ನಿವೇಶನದಾರರು ಕಚೇರಿಗಳಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ.
ನಿವೇಶನದಾರರು ಮನೆ ನಿರ್ಮಿಸಲು ಕಟ್ಟಡ ನಕ್ಷೆಗೆ ಬಿಡಿಎ ಮಂಜೂರಾತಿ ನೀಡಬೇಕು. ‘ಕಟ್ಟಡ ನಕ್ಷೆ’ ತಯಾರಿಸಿಕೊಂಡು ಅನುಮೋದನೆಗೆ ಅರ್ಜಿಸಲ್ಲಿಸಲು ಬಿಡಿಎ ವಲಯ ಕಚೇರಿಗಳಿಗೆ ತೆರಳಬೇಕು. ಅಧಿಕಾರಿಗಳು ಇದ್ದರೆ ಅದೇ ದಿನ, ಇಲ್ಲದೇ ಇದ್ದರೆ ಮತ್ತೊಂದು ದಿನ ಅರ್ಜಿ ಸಲ್ಲಿಸಲು ಹೋಗಬೇಕು. ಅರ್ಜಿ ಸಲ್ಲಿಸಿದ ನಂತರ ಯಾವಾಗ ಅನುಮತಿ ಸಿಗುತ್ತದೆ? ಎಂದು ತಿಂಗಳುಗಟ್ಟಲೆ ಕಾಯಬೇಕು.
ಇದು ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ ಸಹಿತ ಬಿಡಿಎ ನಿರ್ಮಿಸಿರುವ ಎಲ್ಲ ಬಡಾವಣೆ ಗಳಲ್ಲಿ ಮನೆ ನಿರ್ಮಿಸುವವರ ಗೋಳು ಆಗಿದೆ.
‘ಬಡಾವಣೆಯನ್ನು ಬಿಡಿಎ ನಿರ್ಮಿಸಿರುವುದರಿಂದ, ಅದೇ ಮಾತೃ ಸಂಸ್ಥೆ. ಹಾಗಾಗಿ ದಾಖಲೆಗಳು ಸರಿ ಇರುತ್ತವೆ. ಆದರೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಗಲು ತಿಂಗಳುಗಟ್ಟಲೆ ಕಾಯಬೇಕು. ಹೀಗಾದರೆ ಮನೆ ಕಟ್ಟುವುದು ಹೇಗೆ’ ಎಂದು ಸರ್ ಎಂ. ವಿಶ್ವೇಶ್ವರಯ್ಯ ಬಿಡಿಎ ಲೇಔಟ್‌ನ ನಿವೇಶನದಾರರ ಸಂಘದ ಅಧ್ಯಕ್ಷ ಡಿ.ಎಸ್.ಗೌಡ ವಿಷಾದಿಸಿದರು
‘ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಎಲ್ಲ ನಿವೇಶನಗಳು ಹಂಚಿಕೆಯಾಗಿವೆ. ಇಲ್ಲಿ ಏನೂ ಫಾಯಿದೆ ಇಲ್ಲ ಎಂದೋ ಯಾರೂ ಇತ್ತ ಗಮನಹರಿಸುತ್ತಿಲ್ಲ. ಇರುವ ಒಬ್ಬ ಕಾರ್ಯಪಾಲಕ ಎಂಜಿನಿಯರ್, ಇಬ್ಬರು ಸಹಾಯಕ ಎಂಜಿನಿಯರ್‌ಗಳು ಸಭೆ ಇನ್ನಿತರ ಕೆಲಸಗಳಲ್ಲಿ ನಿರತರಾಗಿರುತ್ತಾರೆ’ ಎಂಬುದು ಅವರ ದೂರು.
‘ನಗರಾಭಿವೃದ್ಧಿ ಇಲಾಖೆ ಅಡಿಯಲ್ಲಿಯೇ ಬಿಬಿಎಂಪಿ ಮತ್ತು ಬಿಡಿಎಗಳಿವೆ. ಬಿಬಿಎಂಪಿಯಲ್ಲಿ ಆನ್‌ಲೈನ್ ವ್ಯವಸ್ಥೆ ಇದೆ. ಬಿಡಿಎಯಲ್ಲಿ ಏಕೆ ಮಾಡುತ್ತಿಲ್ಲ ಎಂದು ಗೊತ್ತಾಗು ತ್ತಿಲ್ಲ. ಆಫ್‌ಲೈನ್ ಪ್ರಕ್ರಿಯೆಯು ಭ್ರಷ್ಟಾ ಚಾರಕ್ಕೆ ಹೆಚ್ಚು ಕಾರಣವಾಗುತ್ತಿದೆ. ಕಚೇರಿ ಸಿಬ್ಬಂದಿ, ಭೂಮಾಪಕರು, ಎಂಜಿನಿಯರ್‌ಗಳು ಹತ್ತಾರು ನೆಪ ಹೇಳುತ್ತಾರೆ. ಭೂಮಾಪಕರೂ ವೇಶನದ ಅಳತೆಗೆ ಸತಾಯಿಸುತ್ತಾರೆ. ಅವರು ಹೇಳಿದ ಸಿವಿಲ್ ಎಂಜಿನಿಯರ್ ಅಥವಾ ವಾಸ್ತುಶಿಲ್ಪಗಾರರಿಂದಲೇ ‘ಪ್ಲ್ಯಾನ್’ ಸಿದ್ಧವಾಗಬೇಕು. ಇಲ್ಲದೇ ಇದ್ದರೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಅಲೆದಾಡಿಸುತ್ತಾರೆ’ ಎಂದು ನಿವೇಶನದಾರರು ದೂರಿದರು.
‘ಮನೆ ನಕ್ಷೆ ಅನುಮೋದನೆ ಪ್ರಕ್ರಿಯೆ ಯನ್ನು ಸಂಪೂರ್ಣವಾಗಿ ಆನ್‌ಲೈನ್ ವ್ಯಾಪ್ತಿಗೆ ತಂದು ಜನಸ್ನೇಹಿಯಾಗಿ ಬಿಡಿಎ ರೂಪಿಸಬೇಕು. ಇತ್ತೀಚೆಗೆ ಬಿಬಿಎಂಪಿ ಜಾರಿಗೊಳಿಸಿರುವ ‘ನಂಬಿಕೆ ನಕ್ಷೆ’ ಮಾದರಿಯನ್ನು ಪರಿಚಯಿಸಬೇಕು’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ- ವೇದಿಕೆಯ ಕಾರ್ಯದರ್ಶಿ ಅಶೋಕ್ ಒತ್ತಾಯಿಸಿದರು.
‘ನಾವು ಈ ಬಗ್ಗೆ ಎರಡು ವರ್ಷಗಳಿಂದ ಬಿಡಿಎ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಆನ್‌ಲೈನ್ ಮಾಡುತ್ತೇವೆ ಎಂದು ಅಧ್ಯಕ್ಷರು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಆದರೆ, ಆಗುತ್ತಿಲ್ಲ. ಆನ್‌ಲೈನ್ ವ್ಯವಸ್ಥೆ ಜೊತೆಗೆ ಸಕಾಲದಡಿ ತರಬೇಕು. ಆಗಷ್ಟೇ ಮನೆ ಕಟ್ಟಲು ನಿವೇಶನದಾರರಿಗೆ ಅನುಕೂಲ’ ಎಂದು ಮುಕ್ತ ವೇದಿಕೆಯ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್ ಅಭಿಪ್ರಾಯಪಟ್ಟರು.
ಅರ್ಜಿ ಸಲ್ಲಿಸುವುದು ಅನುಮೋದನೆ ಪಡೆಯುವುದು ಸೇರಿದಂತೆ ಎಲ್ಲವನ್ನು ಶೀಘ್ರದಲ್ಲಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ತರಲಾಗುವುದು.ಎನ್. ಜಯರಾಂ ಬಿಡಿಎ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.