ADVERTISEMENT

ಮಂಡ್ಯದ ಘಟನೆಯಿಂದ ಹೆಚ್ಚಿದ ಆತಂಕ: ಸಾಹಿತಿ ಮರುಳಸಿದ್ದಪ್ಪ

ಸೌಹಾರ್ದ ಪರಂಪರೆ ಅಭಿಯಾನದಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 15:19 IST
Last Updated 30 ಜನವರಿ 2024, 15:19 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಹುತಾತ್ಮ ದಿನದ ಅಂಗವಾಗಿ ಮಂಗಳವಾರ ನಡೆದ ಸೌಹಾರ್ದ ಸಭೆ ಹಾಗೂ ಮಾನವ ಸರಪಳಿ ಅಭಿಯಾನದಲ್ಲಿ ನ್ಯಾ. ಎಚ್.ಎನ್. ನಾಗಮೋಹನದಾಸ್, ಸಲೀಂ ಅಹಮದ್‌, ಕೆ.ಮರುಳಸಿದ್ಧಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ನ್ಯಾ. ವಿ.ಗೋಪಾಲಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. – ಪ್ರಜಾವಾಣಿ ಚಿತ್ರ
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಹುತಾತ್ಮ ದಿನದ ಅಂಗವಾಗಿ ಮಂಗಳವಾರ ನಡೆದ ಸೌಹಾರ್ದ ಸಭೆ ಹಾಗೂ ಮಾನವ ಸರಪಳಿ ಅಭಿಯಾನದಲ್ಲಿ ನ್ಯಾ. ಎಚ್.ಎನ್. ನಾಗಮೋಹನದಾಸ್, ಸಲೀಂ ಅಹಮದ್‌, ಕೆ.ಮರುಳಸಿದ್ಧಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ನ್ಯಾ. ವಿ.ಗೋಪಾಲಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. – ಪ್ರಜಾವಾಣಿ ಚಿತ್ರ    

ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಸೌಹಾರ್ದ ಕರ್ನಾಟಕ’ದಿಂದ ಹುತಾತ್ಮ ದಿನದ ಅಂಗವಾಗಿ ಮಂಗಳವಾರ ಸೌಹಾರ್ದ ಪರಂಪರೆ ಅಭಿಯಾನ ನಡೆಯಿತು.

ಅಭಿಯಾನದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರು, ಸಾಹಿತಿಗಳು, ನಿವೃತ್ತ ನ್ಯಾಯಾಧೀಶರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೌಹಾರ್ದ ಮಾನವ ಸರಪಳಿ ರಚಿಸಿ, ನಾಡಿನಲ್ಲಿ ಶಾಂತಿ ಹಾಗೂ ಸೌಹಾರ್ದ ನೆಲೆಸಲಿ ಎಂದು ಘೋಷಣೆ ಕೂಗಿದರು.

ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ‘ದೇಶವು ದೊಡ್ಡ ಆತಂಕಕ್ಕೆ ಸಿಲುಕಿದೆ. ಧರ್ಮ ಹಾಗೂ ದೇವರನ್ನು ರಾಜಕಾರಣಕ್ಕೆ ಬಳಸಿಕೊಂಡು ಲಾಭ, ನಷ್ಟದ ಲೆಕ್ಕಾಚಾರ ಹಾಕಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳು ಎಲ್ಲರಲ್ಲೂ ಆತಂಕವನ್ನು ಹುಟ್ಟಿಸಿವೆ. ಈ ದೇಶಕ್ಕೆ ತನ್ನದೇ ಸಾಂಸ್ಕೃತಿಕ ಹಾಗೂ ರಾಜಕೀಯ ಪರಂಪರೆ ಇತ್ತು. ಅದನ್ನು ಹಾಳು ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ರಾಜ್ಯವು ಒಳ್ಳೆಯ ರಾಜಕಾರಣಕ್ಕೆ ಹೆಸರಾಗಿತ್ತು. ಕೆಲವು ವರ್ಷಗಳಿಂದ ಅದನ್ನು ಬುಡಮೇಲು ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದರು.

‘ಸಹಿಷ್ಣುತೆ ಎಂಬುದು ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿದೆ. ಅಂತಹ ದುರಿತ ಕಾಲದಲ್ಲಿ ನಾವಿದ್ದೇವೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ’ ಎಂದು ಹೇಳಿದರು.

ಸಾಹಿತಿ ಜಿ.ರಾಮಕೃಷ್ಣ ಮಾತನಾಡಿ, ‘ವಿಷಪೂರಿತ ವಾತಾವರಣ ಹೇಗೆ ಎದುರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸಮುದಾಯಗಳ ನಡುವೆ ಹುಳಿ ಹಿಂಡುವ ಕೆಲಸಗಳನ್ನು ನಡೆಸುತ್ತಿದ್ದಾರೆ’ ಎಂದು ಹೇಳಿದರು.

ಲೇಖಕಿ ಕೆ.ಷರೀಫಾ ಮಾತನಾಡಿ, ‘ಮಣಿಪುರ ರಾಜ್ಯದಲ್ಲಿ ಹಿಂಸಾಚಾರಗಳು ನಡೆದಿದ್ದರೂ ಪ್ರಧಾನಿ ಅಲ್ಲಿಗೆ ಭೇಟಿ ನೀಡಲಿಲ್ಲ. ಎಂತಹ ಕಾಲದಲ್ಲಿ ನಾವಿದ್ದೇವೆ’ ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್, ಲೇಖಕರಾದ ಮಲ್ಲಿಕಾರ್ಜುನ ಕಡಕೋಳ, ವಿಜಯಾ, ವಸುಂಧರಾ ಭೂಪತಿ, ಎಚ್‌.ಎಲ್.ಪುಷ್ಪಾ, ನಿರ್ದೇಶಕ ಬಿ.ಸುರೇಶ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.