ADVERTISEMENT

ಹೆಚ್ಚಿದ ಬಿಸಿಲ ಬೇಗೆ: ಎಳನೀರು, ಹಣ್ಣಿನ ರಸಗಳಿಗೆ ಭಾರಿ ಬೇಡಿಕೆ

ಕೈಕೊಟ್ಟ ಮಳೆ; ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನಗರದ ತಾಪಮಾನ

ಬಾಲಕೃಷ್ಣ ಪಿ.ಎಚ್‌
Published 27 ಏಪ್ರಿಲ್ 2024, 21:05 IST
Last Updated 27 ಏಪ್ರಿಲ್ 2024, 21:05 IST
ನಗರದ ಲಗ್ಗೆರೆಯಲ್ಲಿ ಕಬ್ಬಿನ ಹಾಲು ಕುಡಿಯುತ್ತಿರುವ ಜನರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಲಗ್ಗೆರೆಯಲ್ಲಿ ಕಬ್ಬಿನ ಹಾಲು ಕುಡಿಯುತ್ತಿರುವ ಜನರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ನಗರದಲ್ಲಿ ಚುನಾವಣೆಯ ಕಾವು ಇಳಿದಿದೆ. ಬಿಸಿಲಿನ ಕಾವು ಏರಿದೆ. ದಾಹ ಕಡಿಮೆ ಮಾಡಿಕೊಳ್ಳಲು ಜನರು ಹಣ್ಣು, ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಎಳನೀರು, ಕಬ್ಬು ಹಣ್ಣಿನ ರಸಗಳಿಗೆ ಭಾರಿ ಬೇಡಿಕೆ ಬಂದಿದೆ.

ರಾಜ್ಯದ ವಿವಿಧೆಡೆ ಮಳೆ ಬಂದಿದ್ದರೆ, ಬೆಂಗಳೂರಿನಲ್ಲಿ ಹೆಸರಿಗಷ್ಟೇ ನಾಲ್ಕು ಹನಿ ಸುರಿದಿದ್ದು ಬಿಟ್ಟರೆ ಉತ್ತಮ ಮಳೆಯಾಗಿಲ್ಲ. ತಾಪಮಾನವು ಒಂದು ವಾರದಿಂದ 37 ಡಿಗ್ರಿ ಸೆಲ್ಸಿಯಸ್‌ ಇದ್ದು, ಮುಂದಿನ ಮೂರು ದಿನ 38 ಡಿಗ್ರಿ ಇರಲಿದೆ. ನಗರದ ಜನರು ಸುಡುಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. 

ಕಾರ್ಯನಿಮಿತ್ತ ಮನೆ, ಕಚೇರಿಗಳಿಂದ ಹೊರ ಬರುವ ಜನರು ರಸ್ತೆ ಬದಿ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಳನೀರು, ಮಜ್ಜಿಗೆ, ಜ್ಯೂಸ್‌, ಕಬ್ಬಿನ ಹಾಲು ಸೇವಿಸಿ ಬಾಯಾರಿಕೆ ನೀಗಿಸಿಕೊಂಡು, ದೇಹ ತಂಪು ಮಾಡಿಕೊಳ್ಳುತ್ತಿದ್ದಾರೆ. ಕಲ್ಲಂಗಡಿ, ಕರ್ಬೂಜ ಸೇರಿದಂತೆ ವಿವಿಧ ಹಣ್ಣುಗಳನ್ನು ಸೇವಿಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ₹ 30 ನೀಡಿ ನಿಂಬೆ ಶರಬತ್ತು ಕುಡಿಯುತ್ತಿದ್ದಾರೆ. 

ADVERTISEMENT

ಬಿಸಿಲಿನ ಧಗೆ ಹೆಚ್ಚಿದ್ದರೂ ಆರೋಗ್ಯದ ಕಾಳಜಿ ಇರುವ ಜನರು ‘ಐಸ್‌ಲೆಸ್‌’ ಜ್ಯೂಸ್‌ಗೇ ಆದ್ಯತೆ ನೀಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಐಸ್‌ಕ್ರೀಂ ಹೆಚ್ಚು ಖರೀದಿಸುತ್ತಿದ್ದಾರೆ. 

‘ಜನವರಿ, ಫೆಬ್ರುವರಿಯಲ್ಲಿ ದಿನಕ್ಕೆ ಒಂದು ಹೊರೆ (ಒಂದು ಕಟ್ಟು) ಕಬ್ಬು ಸಾಕಾಗುತ್ತಿತ್ತು. ಬಿಸಿಲು ಜಾಸ್ತಿಯಾಗುತ್ತಿದ್ದಂತೆ ಕಬ್ಬಿನ ಹಾಲು ಕುಡಿಯುವವರ ಸಂಖ್ಯೆ ಹೆಚ್ಚಿದ್ದರಿಂದ ಮಾರ್ಚ್‌ ತಿಂಗಳಿಂದ ದಿನಕ್ಕೆ ಮೂರು ಹೊರೆ ಕಬ್ಬು ವ್ಯಾಪಾರವಾಗುತ್ತಿದೆ. ವಾರದ ಕೊನೆ ದಿನಗಳಾದ ಶನಿವಾರ, ಭಾನುವಾರ ಐದು ಹೊರೆ ಕಬ್ಬು ಬೇಕಾಗುತ್ತದೆ. ಐಸ್‌ಲೆಸ್‌ ಕೇಳುವವರೇ ಹೆಚ್ಚಾಗಿದ್ದಾರೆ’ ಎಂದು ಲಗ್ಗೆರೆಯ ಕಬ್ಬಿನ ಹಾಲಿನ ವ್ಯಾಪಾರಿ ಮಂಜುಳಾ ತಿಳಿಸಿದರು.

ಎಳನೀರು ದರ ಏರಿಕೆ: ಮೂರು ತಿಂಗಳ ಹಿಂದೆ ಎಳನೀರಿಗೆ ₹ 40 ಇತ್ತು. ಬೇಸಿಗೆ ಜಾಸ್ತಿಯಾಗುತ್ತಿದ್ದಂತೆ ಎಳನೀರು ಇಳುವರಿ ಇಳಿಮುಖವಾಗಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ಎಳನೀರಿನ ಬೆಲೆ ಮಾರ್ಚ್‌ನಲ್ಲಿ ₹ 45ಕ್ಕೆ ಏರಿತ್ತು. ಈಗ ₹ 50ಕ್ಕೆ ತಲುಪಿದೆ. ಆದರೂ ಎಳನೀರು ಪೂರೈಕೆದಾರರೊಂದಿಗೆ ಉತ್ತಮ ಸಂಪರ್ಕ ಹೊಂದಿದ ವ್ಯಾಪಾರಿಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರಿಗಳಿಗೆ ಸಿಗುತ್ತಿಲ್ಲ. 

‘ಈಗ ಬಿಸಿಲು ಹೆಚ್ಚಿರುವುದರಿಂದ ಎಳನೀರು ಬರುತ್ತಿಲ್ಲ, ಪರಿಚಯದವರು ಪೂರೈಸುತ್ತಿದ್ದಾರೆ. ಎಳನೀರಿಗೆ ಮಧ್ಯಾಹ್ನದವರೆಗೆ ಭಾರಿ ಬೇಡಿಕೆ ಇರುತ್ತದೆ. ಮಧ್ಯಾಹ್ನದ ಬಳಿಕ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ’ ಎಂದು ಮರಿಯಪ್ಪನ ಪಾಳ್ಯದ ಎಳನೀರು ವ್ಯಾಪಾರಿ ಕೃಷ್ಣಪ್ಪ ತಿಳಿಸಿದರು.

ತಾಳೆಹಣ್ಣಿಗೂ ಬೇಡಿಕೆ: ದೇಹವನ್ನು ತಂಪಾಗಿಸುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿರುವ ತಾಳೆಹಣ್ಣಿಗೂ ನಗರದಲ್ಲಿ ಬೇಡಿಕೆ ಇದೆ. ಮೂರು ಕಣ್ಣಿನ ಒಂದು ತಾಳೆಹಣ್ಣು ₹ 50ಕ್ಕೆ ಮಾರಾಟವಾಗುತ್ತಿದೆ. 

ದೇಹ ನಿರ್ಜಲೀಕರಣಗೊಂಡು ಅಸ್ವಸ್ಥರಾಗುವವರಿಗೆ ಸಹಕಾರಿಯಾಗಿರುವ ಈ ಹಣ್ಣು ನಗರದ ಜನಸಂದಣಿ ಇರುವ ರಸ್ತೆಗಳ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ.

ನಗರದ ಮರಿಯಪ್ಪನ ಪಾಳ್ಯದಲ್ಲಿ ಜನರು ಎಳನೀರು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಜನ ಏನಂತಾರೆ?
ತುಂಬಾ ಬಿಸಿಲು ಇರುವುದರಿಂದ ಊಟ ತಿಂಡಿ ಹೆಚ್ಚು ತಿನ್ನಲು ಆಗುತ್ತಿಲ್ಲ. ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣು ಜಾಸ್ತಿ ಬಳಕೆ ಮಾಡುತ್ತಿದ್ದೇವೆ. ಹೊರಗೆ ಹೋದರೆ ಕಬ್ಬಿನ ಜ್ಯೂಸ್‌ ಎಳನೀರು ಕುಡಿಯುತ್ತಿದ್ದೇವೆ. ಇದರಿಂದ ದೇಹ ನಿರ್ಜಲೀಕರಣವಾಗುವುದು ತಪ್ಪುತ್ತದೆ.
–ಶುಭಾ ಬಿ.ಎಸ್‌. ನಾಯಂಡಹಳ್ಳಿ ಇನ್ಫೊಸಿಸ್‌ ಉದ್ಯೋಗಿ
ಸೆಕೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿತ್ಯ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಐದು ಲೀಟರ್‌ ನೀರು ಕುಡಿಯುತ್ತೇನೆ ಆದರೂ ಸಾಕಾಗುತ್ತಿಲ್ಲ. ಹೊರಗೆ ಹೋದರೆ ಕಲ್ಲಂಗಡಿ ಹಣ್ಣಿನ ಜ್ಯೂಸು ಎಳನೀರು ಕಬ್ಬಿನ ಹಾಲು ಕುಡಿಯುತ್ತೇನೆ. ಮನೆಯಲ್ಲಿ ಬಾರ್ಲಿ ನೀರು ಮಜ್ಜಿಗೆ ಸೇವಿಸುತ್ತೇನೆ. ಬಿಸಿಲು ಹೀಗೇ ಮುಂದುವರಿದರೆ ಬಹಳ ಕಷ್ಟವಾಗಲಿದೆ.
–ಪುರುಷೋತ್ತಮ ಸಿ.ಡಿ. ಡೆಂಟಲ್‌ ಕ್ಲಿನಕ್‌ ಆರೋಗ್ಯ ಸಿಬ್ಬಂದಿ ಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.