ADVERTISEMENT

ಭಾರತ ದಾಳಿಕೋರ ರಾಷ್ಟ್ರವಲ್ಲ: ರಾಜನಾಥ್‌ ಸಿಂಗ್‌

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಬಾಲಕೃಷ್ಣ ‍ಪಿ.ಎಚ್‌.
Published 10 ಫೆಬ್ರುವರಿ 2025, 20:50 IST
Last Updated 10 ಫೆಬ್ರುವರಿ 2025, 20:50 IST
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭವಾದ ಏರೋ ಇಂಡಿಯಾ 2025 ಉದ್ಘಾಟನಾ ಸಮಾರಂಭದಲ್ಲಿ ಯುದ್ಧವಿಮಾನಗಳ ಸಾಹಸ ಪ್ರದರ್ಶನ ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-Photo By/Krishnakumar P S
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭವಾದ ಏರೋ ಇಂಡಿಯಾ 2025 ಉದ್ಘಾಟನಾ ಸಮಾರಂಭದಲ್ಲಿ ಯುದ್ಧವಿಮಾನಗಳ ಸಾಹಸ ಪ್ರದರ್ಶನ ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-Photo By/Krishnakumar P S   

ಬೆಂಗಳೂರು: ಭಾರತವು ಇಲ್ಲಿಯವರೆಗೆ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಯಾವುದೇ ಮಹಾನ್‌ ಶಕ್ತಿಗಳ ಪೈಪೋಟಿಯಲ್ಲಿ ಭಾಗಿಯಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಪಾದಿಸಿದರು.

ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭವಾದ ಏರೊ ಇಂಡಿಯಾ–2025 ವೈಮಾನಿಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಭದ್ರತೆ ಮತ್ತು ಶಾಂತಿ ಪ್ರತ್ಯೇಕ ವಿಚಾರಗಳಲ್ಲ. ಜಾಗತಿಕವಾಗಿ ಅನಿಶ್ಚಿತತೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ನಮ್ಮ ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಯಾಗಿದೆ. ಎಂದರು.

ADVERTISEMENT

ಪರಸ್ಪರ ಗೌರವ, ಆಸಕ್ತಿ ಮತ್ತು ಪ್ರಯೋಜನದ ಆಧಾರದ ಮೇಲೆ ಸಮಾನ ಮನಸ್ಕ ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಏರೊ ಇಂಡಿಯಾ–2025  ವೇದಿಕೆಯನ್ನು ಒದಗಿಸುತ್ತಿದೆ. ದೇಶದ ಕೈಗಾರಿಕಾ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಜಗತ್ತಿಗೆ ಪ್ರದರ್ಶಿಸುವ ಕಾರ್ಯವಾಗುತ್ತಿದೆ. ಸ್ನೇಹಪರ ದೇಶಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ದೇಶಗಳು ಒಟ್ಟಾಗಿ ಬಲಿಷ್ಠಗೊಳ್ಳಬೇಕು. ಉತ್ತಮ ವಿಶ್ವಕ್ಕಾಗಿ ಕೆಲಸ ಮಾಡಬೇಕು. ಆಗ ಮಾತ್ರ ಶಾಶ್ವತ ಶಾಂತಿಯ ನೆಲೆಗೊಳ್ಳಲು ಸಾಧ್ಯ ಎಂದು ಹೇಳಿದರು.

ರಕ್ಷಣಾ ಕೈಗಾರಿಕಾ ವಲಯವನ್ನು ಹಿಂದೆ ರಾಷ್ಟ್ರೀಯ ಆರ್ಥಿಕತೆಯ ಒಂದಂಶ ಎಂದು ಕೂಡ ಪರಿಗಣಿಸಿರಲಿಲ್ಲ. ಈಗ ಭಾರತದ ಆರ್ಥಿಕತೆಯ ಎಂಜಿನ್‌ ಆಗಿದೆ. 2025-26ರ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ₹ 6.81 ಲಕ್ಷ ಕೋಟಿಯಷ್ಟು ದಾಖಲೆ ಮೊತ್ತ ಹಂಚಿಕೆಯಾಗಿದೆ. ರಕ್ಷಣೆಯನ್ನು ಪ್ರಮುಖ ಆದ್ಯತೆಯ ಕ್ಷೇತ್ರವೆಂದು ಸರ್ಕಾರ ಪರಿಗಣಿಸಿರುವುದಕ್ಕೆ ಇದು ಪುರಾವೆ ಎಂದು ಪ್ರತಿಪಾದಿಸಿದರು.

‘ಖಾಸಗಿ ವಲಯವು ಆರ್ಥಿಕ ಮುಖ್ಯವಾಹಿನಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ. ಖಾಸಗಿ ಪಾಲುದಾರಿಕೆಯು ದೇಶದಲ್ಲಿ ಸಮೃದ್ಧಿಯ ಹೊಸ ಅಲೆಯನ್ನು ತರಲಿದೆ. ಮುಂದುವರಿದ ದೇಶಗಳಲ್ಲಿ ಖಾಸಗಿ ಉದ್ಯಮವು ರಕ್ಷಣಾ ಉತ್ಪಾದನೆಯನ್ನು ಮುನ್ನಡೆಸಿದೆ. ಇಲ್ಲಿಯೂ ರಕ್ಷಣಾ ಉದ್ಯಮದಲ್ಲಿ ಖಾಸಗಿ ಕ್ಷೇತ್ರದವರು ಸಮಾನ ಪಾಲುದಾರರಾಗುವ ಸಮಯ ಬಂದಿದೆ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಶಿವಕುಮಾರ್ ಮಾತನಾಡಿ,  ‘ನಾಗರಿಕ ಮತ್ತು ಮಿಲಿಟರಿ ವಾಯುಯಾನ ಎರಡರಲ್ಲೂ ಭಾರತದ ಪ್ರಗತಿಯನ್ನು ಎತ್ತಿ ತೋರಿಸುವ ಕಾರ್ಯಕ್ರಮವಾಗಿದೆ. ಇದು ಕೇವಲ ಪ್ರದರ್ಶನವಲ್ಲ. ಇದು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಹಾಗೂ ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಬೆಳೆಸುವ ವೇದಿಕೆ’ ಎಂದುಹೇಳಿದರು.

‘ದೇಶದ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಉತ್ಪಾದನೆ ಮತ್ತು ರಕ್ಷಣಾ ಸಂಶೋಧನೆಯಲ್ಲಿ ಶೇ 60ಕ್ಕಿಂತ ಹೆಚ್ಚು ಕೊಡುಗೆಯನ್ನು ಕರ್ನಾಟಕ ನೀಡುತ್ತಿದೆ. ದೇಶದ ಏರೋಸ್ಪೇಸ್ ರಾಜಧಾನಿಯೇ ಬೆಂಗಳೂರು. ಎಚ್‌ಎಎಲ್, ಇಸ್ರೊ, ಬೋಯಿಂಗ್ ಇಂಡಿಯಾದಂತಹ ಪ್ರಮುಖ ಸಂಸ್ಥೆಗಳು ಭಾರತದ ರಕ್ಷಣಾ ಮತ್ತು ಬಾಹ್ಯಾಕಾಶ ಸಾಮರ್ಥ್ಯಗಳಿಗೆ ಭಾರಿ ಕೊಡುಗೆಗಳನ್ನು ನೀಡುತ್ತಿವೆ. ಬೆಂಗಳೂರಿನಲ್ಲಿ ಬಾಹ್ಯಾಕಾಶ ವಲಯದಲ್ಲಿ 1.50 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ’ ಎಂದರು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭವಾದ ಏರೋ ಇಂಡಿಯಾ 2025 ಉದ್ಘಾಟನಾ ಸಮಾರಂಭದಲ್ಲಿ ಜಾಗ್ವಾರ್‌ ಯುದ್ಧ ವೈಮಾನಿಕ ತಂಡ ಸಾಹಸ ಪ್ರದರ್ಶನ ನಡೆಸಿತು ಪ್ರಜಾವಾಣಿ ಚಿತ್ರ:ಕೃಷ್ಣಕುಮಾರ್ ಪಿ.ಎಸ್.

Highlights - ರಾಜನಾಥ್‌ ಸಿಂಗ್‌ ಅಂದಿದ್ದೇನು? * ‘ಆತ್ಮನಿರ್ಭರ್ ಭಾರತ್’, ‘ಮೇಕ್ ಇನ್ ಇಂಡಿಯಾ’ವು ‘ಮೇಕ್ ಫಾರ್ ದಿ ವರ್ಲ್ಡ್’ಗೆ ಪೂರಕ * 2047ಕ್ಕೆ ವಿಕಸಿತ ಭಾರತವನ್ನಾಗಿ ಮಾಡುವ ಪ್ರಧಾನಿ ಮೋದಿ ಕನಸಿಗೆ ‘ಏರೊ ಇಂಡಿಯಾ’ ಹೆಜ್ಜೆ * ₹ 1.27 ಲಕ್ಷ ಕೋಟಿ ರಕ್ಷಣಾ ಉಪಕರಣ ಉತ್ಪಾದನೆ, ₹ 21 ಸಾವಿರ ಕೋಟಿ ಮೌಲ್ಯದ ಉಪಕರಣ ರಫ್ತು 

Cut-off box - ವೈಮಾನಿಕ ಮಹಾಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ ಅಧ್ಯಾತ್ಮ ಮಹಾಕುಂಭ ಮೇಳ ನಡೆಯುತ್ತಿದ್ದರೆ ಇಲ್ಲಿ ವೈಮಾನಿಕ ಮಹಾಕುಂಭ ಮೇಳ ನಡೆಯುತ್ತಿದೆ ಎಂದು ರಾಜನಾಥ್‌ ಸಿಂಗ್‌ ಬಣ್ಣಿಸಿದರು. ಅಲ್ಲಿ ಅಂತರಂಗವನ್ನು ಬೆಳಗುವ ಕೆಲಸವಾಗುತ್ತಿದ್ದರೆ ಇಲ್ಲಿ ಬಹಿರಂಗದ ಸಾಮರ್ಥ್ಯ ವೃದ್ಧಿಯ ಪ್ರದರ್ಶನವಾಗುತ್ತಿದೆ. ಅದು ಆತ್ಮಾವಲೋಕನದ ಕುಂಭವಾದರೆ ಇದು ಸಂಶೋಧನೆಯ ಕುಂಭ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.