ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಭದ್ರತೆ ಹಿನ್ನೆಲೆ ಪ್ರಯಾಣಿಕರು ವಿಮಾನ ಹೊರಡುವ ಸಮಯಕ್ಕಿಂತ ಮೂರು ಗಂಟೆಗಳ ಮುನ್ನ ವಿಮಾನ ನಿಲ್ದಾಣಕ್ಕೆ ತಲುಪುವಂತೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮನವಿ ಮಾಡಿದೆ.
ಪ್ರಯಾಣಿಕರ ಸಲಹೆ ಮಾರ್ಗಸೂಚಿಯಲ್ಲಿ ಹೊಸ ಅಂಶ ಸೇರ್ಪಡೆ ಮಾಡಿದ್ದು, ಹೆಚ್ಚಿನ ಭದ್ರತಾ ದೃಷಿಯಿಂದ ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯ ತಪಾಸಣೆ ನಡೆಸುವ ನಿಟ್ಟಿನಲ್ಲಿ ವಿಮಾನ ಹೊರಡುವ ಸಮಯಕ್ಕಿಂತ 3 ಗಂಟೆ ಮುಂಚೆಯೇ ನಿಲ್ದಾಣವನ್ನು ತಲುಪಬೇಕೆಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಿಳಿಸಿದೆ.
ದೇಶದಾದ್ಯಂತ ಭದ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವರ್ಧಿತ ಸ್ಕ್ರೀನಿಂಗ್ ಕ್ರಮಗಳು ಜಾರಿಯಲ್ಲಿವೆ. ಸುಗಮ ಚೆಕ್-ಇನ್, ತಪಸಾಣೆ ಹಾಗೂ ಬೋರ್ಡಿಂಗ್ ಅನುಭವ ಪಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಕೆಐಎ ಮಾಹಿತಿ ನೀಡಿದೆ.
ಹೊಸ ಮಾರ್ಗಸೂಚಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಕೆಐಎ ತಿಳಿಸಿದೆ.
'ಎಲ್ಲಾ ವಿಮಾನಗಳಿಗೆ ದ್ವಿತೀಯ ಹಂತದ ಭದ್ರತಾ (ಸೆಕೆಂಡರಿ ಲ್ಯಾಡರ್ ಪಾಯಿಂಟ್) ತಪಾಸಣೆಯನ್ನು ಕಡ್ಡಾಯಗೊಳಿಸಿದೆ, ವಿಮಾನ ನಿಲ್ದಾಣಗಳ ಟರ್ಮಿನಲ್ ಕಟ್ಟಡಗಳಲ್ಲಿ ಪ್ರಯಾಣಿಕರನ್ನು ಭೇಟಿ ಮಾಡುವವರಿಗೆ ನಿರ್ಬಂಧ ವಿಧಿಸಲಾಗಿದೆ' ಎಂದು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.