ADVERTISEMENT

ಬೆಂಗಳೂರು | ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ: ಕಿರಣ್ ಕುಮಾರ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 14:40 IST
Last Updated 22 ಆಗಸ್ಟ್ 2025, 14:40 IST
ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯಲ್ಲಿ ಆಯೋಜಿಸಿರುವ ಕಲಾ ಉತ್ಸವವನ್ನು ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಉದ್ಘಾಟಿಸಿದರು. 
ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯಲ್ಲಿ ಆಯೋಜಿಸಿರುವ ಕಲಾ ಉತ್ಸವವನ್ನು ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಉದ್ಘಾಟಿಸಿದರು.    

ಬೆಂಗಳೂರು: ಕಳೆದ 50 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳವಣಿಗೆ ಸಾಧಿಸಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್ ಕುಮಾರ್ ಹೇಳಿದರು.

ಮಾರತ್ತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯಲ್ಲಿ ಎರಡು ದಿನ ಆಯೋಜಿಸಿರುವ ಕಲಾ ಉತ್ಸವ–2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘1975ರಲ್ಲಿ ಭಾರತ ತನ್ನ ಉಪಗ್ರಹ ಕಾರ್ಯಕ್ರಮಗಳಿಗೆ ಅಮೆರಿಕದಂತಹ ಮುಂದುವರಿದ ದೇಶಗಳನ್ನು ಅವಲಂಬಿಸಿತ್ತು. ಆದರೆ, ಇಂದು ದೇಶದ ಪ್ರತಿಭಾನ್ವಿತ ವಿಜ್ಞಾನಿಗಳ ಶ್ರಮ ಹಾಗೂ ಬದ್ಧತೆಯಿಂದಾಗಿ ಮುಂದುವರಿದ ದೇಶಗಳಿಗೆ ಸರಿ ಸಮಾನವಾಗಿ ಉಪಗ್ರಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ’ ಎಂದರು. 

ಹಲವು ದೇಶಗಳು ವಸಾಹತು ಮನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದರೆ, ಭಾರತ ಸದಾ ಸರ್ವರ ಒಳಿತಿನ ನಿಟ್ಟಿನಲ್ಲಿ ಕಾರ್ಯಮಗ್ನವಾಗಿದೆ. ಆದ್ದರಿಂದ ಇಂದು ಎಂತಹ ಸವಾಲುಗಳು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪಡೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಶಾಲೆಯ ಅಧ್ಯಕ್ಷ ಕೆ. ಹರೀಶ್ ಮಾತನಾಡಿ, ‘ಉತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸುವರು. ವಿದ್ಯಾರ್ಥಿಗಳಿಗೆ ಗಾಯನ, ನೃತ್ಯ, ಪ್ರಬಂಧ, ನಾಟಕ, ರಸಪ್ರಶ್ನೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಮರಳುಶಿಲ್ಪ ಉತ್ಸವ ಪ್ರಮುಖ ಆಕರ್ಷಣೆಯಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.