ADVERTISEMENT

ಬೆಂಗಳೂರು: ಸೌರಶಕ್ತಿ ಸಂಯೋಜಿತ ಇ.ವಿ ಚಾರ್ಜಿಂಗ್ ಹಬ್ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:06 IST
Last Updated 2 ಜೂನ್ 2025, 14:06 IST
<div class="paragraphs"><p>ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬೇಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಸ್ಕಾಂ ಅನುಷ್ಠಾನಗೊಳಿಸಿರುವ ದೇಶದ ಮೊದಲ ಸೌರಶಕ್ತಿ ಆಧಾರಿತ ಸೆಕೆಂಡ್ ಲೈಫ್ ಬ್ಯಾಟರಿ ಇ.ವಿ ಚಾರ್ಜಿಂಗ್ ಕೇಂದ್ರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು -ಪ್ರಜಾವಾಣಿ ಚಿತ್ರ</p></div>

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬೇಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಸ್ಕಾಂ ಅನುಷ್ಠಾನಗೊಳಿಸಿರುವ ದೇಶದ ಮೊದಲ ಸೌರಶಕ್ತಿ ಆಧಾರಿತ ಸೆಕೆಂಡ್ ಲೈಫ್ ಬ್ಯಾಟರಿ ಇ.ವಿ ಚಾರ್ಜಿಂಗ್ ಕೇಂದ್ರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು -ಪ್ರಜಾವಾಣಿ ಚಿತ್ರ

   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಸ್ಕಾಂ ಅನುಷ್ಠಾನಗೊಳಿಸಿರುವ ದೇಶದ ಮೊದಲ ಸೌರಶಕ್ತಿ ಆಧಾರಿತ ಸೆಕೆಂಡ್ ಲೈಫ್ ಬ್ಯಾಟರಿ ಇ.ವಿ ಚಾರ್ಜಿಂಗ್ ಕೇಂದ್ರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಉದ್ಘಾಟಿಸಿದರು.

ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿಐಝಡ್) ಮತ್ತು ಬಾಷ್ ಕಂಪನಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಇ.ವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ‌.

ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವ ಜಾರ್ಜ್‌, ‘ವಿದ್ಯುತ್ ವಾಹನ ಮೂಲಸೌಕರ್ಯ ಅಭಿವೃದ್ದಿಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದ್ದು, ಸುಸ್ಥಿರ ಇಂಧನ ಬಳಕೆಯ ಮಾದರಿಯಲ್ಲೂ ನಮ್ಮದೇ ಮೊದಲ ಹೆಜ್ಜೆಯಾಗಿದೆ’ ಎಂದರು.

ADVERTISEMENT

'ವಿದ್ಯುತ್ ವಾಹನಗಳ ಬಳಕೆ ಹೆಚ್ಚಿದಂತೆ ನಮ್ಮ ಸರ್ಕಾರ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿಸುತ್ತಿದೆ. ರಾಜ್ಯದಲ್ಲಿ 5,880 ಇ.ವಿ ಚಾರ್ಜಿಂಗ್‌ ಕೇಂದ್ರಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,462 ಇ.ವಿ ಚಾರ್ಜಿಂಗ್ ಕೇಂದ್ರಗಳಿವೆ. ಈ ವರ್ಷ ಹೊಸದಾಗಿ 140 ಚಾರ್ಜಿಂಗ್‌ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲೂ ಇ.ವಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುತ್ತಿರುವ ಕ್ಯಾಬ್‌ ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಲಾಗಿದೆ. ಈ ರಸ್ತೆಯಲ್ಲಿ ನಿತ್ಯ 10 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿಗಳು ಸಂಚರಿಸುತ್ತವೆ. ಅದರಲ್ಲಿ ಇ.ವಿ ಕಾರುಗಳು ಹೆಚ್ಚಿವೆ. ಟ್ಯಾಕ್ಸಿ ಚಾಲಕರು ಕಡಿಮೆ ವೆಚ್ಚದಲ್ಲಿ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್‌, ‘24 ಗಂಟೆಗಳ ಕಾಲ ಇ.ವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌ ಇದು. ಬೆಸ್ಕಾಂ ಕೈಗೆಟುಕುವ ದರದಲ್ಲಿ ಇ.ವಿ ಚಾರ್ಜಿಂಗ್‌ ಸೌಲಭ್ಯ ಒದಗಿಸುತ್ತಿದೆ. ಖಾಸಗಿಯವರ ಚಾರ್ಜಿಂಗ್‌ ದರ ಬೆಸ್ಕಾಂಗಿಂತ 2 ರಿಂದ 3 ಪಟ್ಟು ಹೆಚ್ಚಿದೆ’ ಎಂದು ವಿವರಿಸಿದರು.

ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರೇಗೌಡ, ಜಿಐಝೆಡ್‌ನ ಸಸ್ಟೈನಬಲ್ ಅರ್ಬನ್ ಮೊಬಿಲಿಟಿಯ ಯೋಜನೆಯ ಮುಖ್ಯಸ್ಥ ಮಂಜುನಾಥ್ ಶೇಖರ್‌, ಯೋಜನಾ ನಿರ್ದೇಶಕ ಕ್ರಿಸ್ಟಿಯನ್‌ ಕಪ್ಫೆನ್‌ಸ್ಟೈನರ್ ಮತ್ತಿತರರು ಹಾಜರಿದ್ದರು.

ಇ.ವಿ ಚಾರ್ಜಿಂಗ್‌ ಹಬ್‌ನ ವಿಶೇಷತೆ

* 24 ಗಂಟೆಗಳು ಇ.ವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌

*ಈ ಹಬ್‌ನಲ್ಲಿ 45 ಕಿ.ವಾ. ಸೌರ ವಿದ್ಯುತ್ ಮತ್ತು 100 ಕಿ.ವಾ.ಎಚ್. ಸೆಕೆಂಡ್-ಲೈಫ್ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯದೊಂದಿಗೆ ಏಕಕಾಲದಲ್ಲಿ 23 ವಾಹನಗಳನ್ನು ಚಾರ್ಜ್‌ ಮಾಡುವ ಪಾಯಿಂಟ್‌ಗಳಿವೆ

* 18 ತ್ವರಿತಗತಿಯ ಚಾರ್ಜಿಂಗ್ ಮತ್ತು 5 ನಿಧಾನಗತಿಯ ಚಾರ್ಜಿಂಗ್ ಪಾಯಿಂಟ್‌ಗಳಿವೆ.‌ ಇದರಲ್ಲಿ ಮೂರು 7.7 ಕಿ.ವಾ ಮತ್ತು ಎರಡು 3.3 ಕಿ.ವಾ(ಎಸಿ) ಪಾಯಿಂಟ್‌ಗಳಿವೆ.

* ಚಾರ್ಜಿಂಗ್ ಕೇಂದ್ರದ ಮೇಲೆ ಸೌರಫಲಕಗಳನ್ನು ಅಳವಡಿಸಲಾಗಿದೆ. ಹಗಲಿನಲ್ಲಿ ಉತ್ಪಾದನೆಯಾಗುವ ಸೌರವಿದ್ಯುತ್‌ ಅನ್ನು ಬ್ಯಾಟರಿಗಳಲ್ಲಿ ಶೇಖರಿಸಿಟ್ಟು ರಾತ್ರಿಯಲ್ಲಿ ವಾಹನಗಳನ್ನು ಚಾರ್ಜ್‌ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರದಲ್ಲಿ ಬ್ಯಾಟರಿ ಸ್ಟೋರೇಜ್ ಘಟಕ ಸ್ಥಾಪಿಸಲಾಗಿದೆ. ಇದರಲ್ಲಿ ಇ.ವಿ ಕಾರಿನಲ್ಲಿ ಬಳಕೆಯಾಗಿರುವ 20 ಬ್ಯಾಟರಿಗಳನ್ನು (ಸೆಕೆಂಡ್ ಲೈನ್ ಬ್ಯಾಟರಿಗಳಿವೆ) ಜೋಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.