ADVERTISEMENT

ಸ್ವಾತಂತ್ರ್ಯೋತ್ಸವ ಸರಳ ಆಚರಣೆಗೆ ಸಿದ್ಧತೆ

500 ಜನರಿಗೆ ಮಾತ್ರ ಪ್ರವೇಶ; ಮಾಸ್ಕ್ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 20:02 IST
Last Updated 13 ಆಗಸ್ಟ್ 2020, 20:02 IST
ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಕವಾಯತು ತಾಲೀಮು ನಡೆಸಿದ ಪೊಲೀಸ್ ಸಿಬ್ಬಂದಿ –ಪ್ರಜಾವಾಣಿ ಚಿತ್ರ
ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಕವಾಯತು ತಾಲೀಮು ನಡೆಸಿದ ಪೊಲೀಸ್ ಸಿಬ್ಬಂದಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಮಟ್ಟದ ಸ್ವಾತಂತ್ರ್ಯೋತ್ಸವವನ್ನುಆ.15ರಂದು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸರಳವಾಗಿ ಆಚರಣೆ ಮಾಡಲು ಬಿಬಿಎಂಪಿ, ನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿವೆ.

‘ಕೋವಿಡ್ ಕಾರಣದಿಂದಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. 75 ಮಂದಿ ಕೊರೋನಾ ಯೋಧರುಹಾಗೂ ಕೋವಿಡ್‌ನಿಂದ ಗುಣಮುಖರಾದ 25 ಮಂದಿಯನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ‌. ಜನಪ್ರತಿನಿಧಿಗಳು,ಅಧಿಕಾರಿಗಳು, ರಕ್ಷಣಾ ಇಲಾಖೆ ಅಧಿಕಾರಿಗಳು ಸೇರಿ 500 ಜನರಿಗೆ ಮಾತ್ರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖಗವಸು ಧರಿಸುವುದು ಕಡ್ಡಾಯ. ಅಂತರ ಕಾಯ್ದುಕೊಂಡು ಕೂರಲು ವ್ಯವಸ್ಥೆ ಮಾಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

‘ಅಂದು ಬೆಳಿಗ್ಗೆ 8.58ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೈದಾನಕ್ಕೆ ಬರಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ಗೌರವ ವಂದನೆ ಸ್ವೀಕರಿಸಿ ನಾಡಿನ ಜನರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ. ದೂರದರ್ಶನ ಮತ್ತು ವೆಬ್‌ ಕಾಸ್ಟಿಂಗ್‌ ಮೂಲಕ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ’ ಎಂದು ಹೇಳಿದರು.

ADVERTISEMENT

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾತನಾಡಿ, ‘ಕೋವಿಡ್ ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೆಎಸ್ಆರ್‌ಪಿ, ಮಹಿಳಾ ಪೊಲೀಸ್, ಬಿಎಸ್‌ಎಫ್‌ ಸೇರಿ 16 ತುಕಡಿಗಳು, 4 ಬ್ಯಾಂಡ್ ಸೇರಿ 20 ತಂಡಗಳು ಕವಾಯುತು ನಡೆಸಲಿದ್ದು, ದಕ್ಷಿಣ ವಲಯದ ಡಿಸಿಪಿ ಗಿರೀಶ್ ಉಸ್ತುವಾರಿ ವಹಿಸಲಿದ್ದಾರೆ’ ಎಂದು ವಿವರಿಸಿದರು.

ಅಂದು ಬೆಳಿಗ್ಗೆ 8.30ರಿಂದ 10.30ರವರೆಗೆಕಬ್ಬನ್ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ ತನಕ ಎರಡೂ ಬದಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.