ಬೆಂಗಳೂರು: ‘ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಕಂಪನಿಗಳಿಗೆ ಮತ್ತೆ ಟೆಂಡರ್ ನೀಡುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
ಪ್ರಸ್ತುತ ಷೆಫ್‌ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳು ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿವೆ. ಅವುಗಳ ಟೆಂಡರ್ ಅವಧಿ 2019ರ ಆಗಸ್ಟ್‌ನಲ್ಲೇ ಮುಕ್ತಾವಾಗಿತ್ತು. ಆ ಬಳಿಕ ಪಾಲಿಕೆ ಕೋರಿಕೆ ಮೇರೆಗೆ ಈ ಕಂಪನಿಗಳೇ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿವೆ.
ಎಂಟು ವಲಯಗಳ ಕ್ಯಾಂಟೀನ್ ನಿರ್ವಹಣೆಗೆ ನಾಲ್ಕು ಪ್ಯಾಕೇಜ್‌ಗಳನ್ನು ರೂಪಿಸಿ ಬಿಬಿಎಂಪಿ ಇತ್ತೀಚೆಗೆ ಟೆಂಡರ್ ಕರೆದಿತ್ತು. ಈ ನಾಲ್ಕೂ ಪ್ಯಾಕೇಜ್‌ಗಳಲ್ಲೂ ಷೆಫ್‌ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳು ಭಾಗವಹಿಸಿವೆ. ಒಂದು ಪ್ಯಾಕೇಜ್‌ನಲ್ಲಿ ಅದಮ್ಯ ಚೇತನ ಸಂಸ್ಥೆಯೂ ಭಾಗವಹಿಸಿವೆ.
‘ಟೆಂಡರ್‌ನ ತಾಂತ್ರಿಕ ಬಿಡ್‌ನಲ್ಲಿ ಷೆಫ್‌ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳೆರಡೂ ಅರ್ಹತೆ ಗಳಿಸಿವೆ. ಹಣಕಾಸು ಬಿಡ್ ಇನ್ನೂ ತೆರೆದಿಲ್ಲ. ಜನವರಿ ಮೊದಲ ವಾರದಲ್ಲಿ ನಾಲ್ಕೂ ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.