ADVERTISEMENT

ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆಗೆ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 19:11 IST
Last Updated 27 ನವೆಂಬರ್ 2022, 19:11 IST
   

ಬೆಂಗಳೂರು: ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಚಾಕು ಇರಿತದಿಂದ ತೀವ್ರ ಗಾಯಗೊಂಡಿರುವ 23 ವರ್ಷದ ಮಹಿಳೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿರುವ ಆಟೊ ಚಾಲಕ ಪರಾರಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿವಾಹಿತ ಮಹಿಳೆ, ಪತಿ ಜೊತೆ ನೆಲೆಸಿದ್ದರು. ಅವರನ್ನು ಪರಿಚಯ ಮಾಡಿಕೊಂಡಿದ್ದ ಆಟೊ ಚಾಲಕ, ಸ್ನೇಹ ಬೆಳೆಸಿದ್ದ. ನಂತರ, ಇಬ್ಬರ ಮಧ್ಯೆ ಸಲುಗೆ ಬೆಳೆದಿತ್ತು. ಇಬ್ಬರೂ ಹಲವೆಡೆ ಸುತ್ತಾಡಿದ್ದರು.’

ADVERTISEMENT

‘ಆಟೊ ಚಾಲಕ ಸಹ ವಿವಾಹಿತನಾಗಿದ್ದ. ಮೊದಲ ಪತ್ನಿಯನ್ನು ತೊರೆದು ಎರಡನೇ ಮದುವೆಯಾಗಲು ತೀರ್ಮಾನಿಸಿದ್ದ ಚಾಲಕ, ಸಲುಗೆ ಇಟ್ಟುಕೊಂಡಿದ್ದ ಮಹಿಳೆಗೆ ವಿಷಯ ತಿಳಿಸಿದ್ದ. ತನ್ನನ್ನು ಎರಡನೇ ಮದುವೆಯಾಗುವಂತೆ ಒತ್ತಾಯಿಸಿದ್ದ. ಆದರೆ, ಮಹಿಳೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಗೆ ಕರೆ ಮಾಡಿದ್ದ ಆರೋಪಿ, ಮಾತನಾಡಬೇಕೆಂದು ಹೇಳಿ ಶುಕ್ರವಾರ ರಾತ್ರಿ ಕದಿರೇನಹಳ್ಳಿ ಬಳಿ ಕರೆಸಿಕೊಂಡಿದ್ದ. ಮದುವೆಯಾಗೋಣವೆಂದು ಪುನಃ ಹೇಳಿದ್ದ. ಅದಕ್ಕೂ ಮಹಿಳೆ ಒಪ್ಪಿರಲಿಲ್ಲ. ಅವಾಗಲೇ ಚಾಕುವಿನಿಂದ ಇರಿದು ಮಹಿಳೆಗೆ ಇರಿದಿದ್ದ. ಸ್ಥಳೀಯರು ರಕ್ಷಣೆಗೆ ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.