ಬೆಂಗಳೂರು: ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ, ಸದಸ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.
‘ಮೇ 14ರಂದು ರಾತ್ರಿ ಈ ಘಟನೆ ನಡೆದಿದೆ. ನರ್ಸೀಂಗ್ ವಿದ್ಯಾರ್ಥಿನಿ ಪ್ರಿಯದರ್ಶಿನಿ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಲಕ್ಷ್ಮಿಪುರದ ರಾಮ್, ಪ್ರಭು ಹಾಗೂ ಅರ್ಜುನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪ್ರಿಯದರ್ಶಿನಿ ಅವರು ತಂದೆ– ತಾಯಿ ಜೊತೆ ವಾಸವಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲಿ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಅವರು ಗುಣಮುಖರಾಗಿದ್ದರು. ಆದರೆ. ಅಕ್ಕ– ಪಕ್ಕದ ಕೆಲ ಮನೆಯವರು ಅವರಿಗೆ ಕಿರುಕುಳ ನೀಡಲಾರಂಭಿಸಿದ್ದರು. ‘ನಮಗೆ ಕೊರೊನಾ ಸೋಂಕು ತಂದು ಹಚ್ಚುತ್ತಿದ್ದಿರಾ’ ಎಂದು ಪೀಡಿಸುತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.
‘ಆರೋಪಿಗಳಾದ ರಾಮ್, ಪ್ರಭು ಹಾಗೂ ಅರ್ಜುನ್ ಸಹ ಪದೇ ಪದೇ ದೂರುದಾರ ಯುವತಿ ಮತ್ತು ಅವರ ಕುಟುಂಬದವರ ಜೊತೆ ಗಲಾಟೆ ಮಾಡುತ್ತಿದ್ದರು. ಇದೇ ಮೇ 14ರಂದು ಸಂಜೆ ಯುವತಿ ಮನೆ ಬಳಿ ಬಂದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಇದೇ ಸಂದರ್ಭದಲ್ಲೇ ಚಾಕುವಿನಿಂದ ದೂರುದಾರ ಯುವತಿ ಕೈಗೂ ಆರೋಪಿಗಳು ಇರಿದಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.